×
Ad

ಆರನೇ ದಿನವೂ ಬಿ.ಸಿ.ರೋಡ್‌ಗೆ ನೀರಿಲ್ಲ; ಹನಿ ನೀರಿಗಾಗಿ ಪುರವಾಸಿಗಳ ಪರದಾಟ

Update: 2018-04-11 23:01 IST

ಬಂಟ್ವಾಳ, ಎ. 11: ತಾಲೂಕಿನ ಕುಡಿಯುವ ನೀರಿಗಾಗಿ ನೂರಾರು ಕೋಟಿ ರೂ. ಖರ್ಚು ಮಾಡಿದರೂ, ಕಳೆದ ನಾಲ್ಕು ದಿನಗಳಿಂದ ಸಮರ್ಪಕ ಕುಡಿಯುವ ನೀರು ಇಲ್ಲದೇ ಪುರಸಭಾ ವ್ಯಾಪ್ತಿಯ ಜನರು ಸಂಕಷ್ಟಕ್ಕೀಡಾಗಿದ್ದು, 5ನೆ ದಿನವಾದ ಬುಧವಾರವೂ ನೀರು ಪೂರೈಕೆಯಾಗದ ಕಾರಣ ಹನಿ ನೀರಿಗಾಗಿ ಜನತೆ ಪರದಾಡುವಂತಾಯಿತು.

ತಾಲೂಕಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ 2ನೇ ಹಂತದ ಬಹುಗ್ರಾಮ ಕುಡಿಯವ ನೀರಿನ ಯೋಜನೆ, ಕೊಳವೆ ನೀರು ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚುಮಾಡಿದರೂ ಕೆಲವೊಂದು ಗ್ರಾಮಗಳು ಸಮರ್ಪಕ ನೀರಿನ ಸೌಕರ್ಯದಿಂದ ವಂಚಿತವಾಗಿದ್ದು, ಬೇಸಿಗೆಯ ಮೊದಲೇ ಸಾರ್ವಜನಿಕರಿಗೆ ನೀರಿನ ಬಿಸಿ ತಟ್ಟಿದೆ.

ತಾಲೂಕಿನ ಹೃದಯ ಭಾಗ, ಮಿನಿವಿಧಾನ ಸೌಧ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳು, ಪ್ರಮುಖ ವ್ಯಾಪಾರ, ವ್ಯವಹಾರದ ಕೇಂದ್ರವಾಗಿರುವ ಬಿ.ಸಿ.ರೋಡ್‌ಗೆ 5ನೇ ದಿನವಾದ ಬುಧವಾರದಂದು ಕೂಡಾ ನೀರು ಪೂರೈಕೆಯಾಗಿಲ್ಲ. ಇಂದು ಕೆಲವು ಕಡೆಗಳಲ್ಲಿ ಸಮಸ್ಯೆ ಮೂಲವನ್ನು ಪತ್ತೆ ಹಚ್ಚಲು ಶ್ರಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿನ ನಾಗರಿಕರು ಹಾಗೂ ಸರಕಾರಿ ಕಚೇರಿ ಸಹಿತ ವಿವಿಧ ವಾಣಿಜ್ಯ ಕಟ್ಟಡಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಹಾಗೂ ಯುವತಿಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಈವರೆಗೆ ಮಾಡಿರುವ ಎಲ್ಲ ಕಾಮಗಾರಿಗಳು ವ್ಯರ್ಥವಾಗಿದ್ದು, ಇದೀಗ ಒಡೆದಿರುವ ಪೈಪ್ ಹುಡುಕಾಟ ಕಾಮಗಾರಿಯನ್ನು ಕೈಬಿಟ್ಟು ಪರ್ಯಾಯ ಇನ್ನೊಂದು ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಒಟ್ಟಾರೆಯಾಗಿ ಮಿನಿವಿಧಾನ ಸೌಧ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳು, ಆಸ್ಪತ್ರೆಗಳು, ಹೊಟೇಲ್, ವಾಣಿಜ್ಯ ಕಟ್ಟಡಗಳನ್ನು ಹೊಂದಿರುವ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ವ್ಯವಹಾರಿಕ ಕೇಂದ್ರವೂ ಆಗಿರುವ ಬಿ.ಸಿ.ರೋಡಿನಲ್ಲೆೀ 5 ದಿನಗಳ ಕಾಲ ನೀರಿನ ಪೂರೈಕೆ ಸ್ಥಗಿತಗೊಂಡಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. 

ಟ್ಯಾಂಕರ್ ಮೂಲಕ ನೀರು ಪೂರೈಕೆ:

ಐದು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡ್, ಕೈಕಂಬ, ಕಾಮಾಜೆ, ಶಾಂತಿಯಂಗಡಿ ಸಹಿತ ನೀರಿನ ಬವಣೆ ಎದುರಿಸುತ್ತಿರುವ ಪ್ರದೇಶಗಳಿಗೆ ಪುರಸಭೆ ವತಿಯಿಂದ ಟ್ಯಾಂಕರ್ ಮೂಲಕ ಬುಧವಾರ ನೀರು ಪೂರೈಕೆ ಮಾಡಲಾಯಿತು. ಇಂದು ಬೆಳಿಗ್ಗೆನಿಂದಲೇ ನಗರದ ಹೊಟೇಲ್ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿರುವ ವಿವಿಧ ರಸ್ತೆಗಳಲ್ಲಿ ನೀರಿನ ಟ್ಯಾಂಕರ್ ವಾಹನಗಳ ಓಡಾಟ ಕಂಡುಬಂತು.
 
ಕೆಲವೊಂದು ತಾಂತ್ರಿಕ ದೋಷದಿಂದಾಗಿ ಜಖಂಗೊಂಡಿರುವ ಪೈಪ್ ಲೈನ್‌ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಸೋಮಯಾಜಿ ಆಸ್ಪತ್ರೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೀರು ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲಿಂದಲೇ ಇನ್ನೊಂದು ಲೈನ್ ಮೂಲಕ ಪರ್ಯಾಯ ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು. ಇದರ ಕಾಮಗಾರಿ ನಡೆಯುತ್ತಿದೆ. ಸದ್ಯದ ಮಟ್ಟಿಗೆ ನೀರಿನ ತೊಂದರೆ ಇರುವ ಕಡೆಗಳಿಗೆ ಪುರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ರೇಖಾ. ಜೆ. ಶೆಟ್ಟಿ,
ಮುಖ್ಯಾಧಿಕಾರಿ ಬಂಟ್ವಾಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News