ತನ್ನ ಸಾವಿಗೆ ಪ್ರಧಾನಿ ಮೋದಿ ಕಾರಣ ಎಂದು ಬರೆದಿಟ್ಟು ರೈತನ ಆತ್ಮಹತ್ಯೆ

Update: 2018-04-11 17:42 GMT
ಚಿತ್ರ ಕೃಪೆ: ANI

ಮುಂಬೈ, ಎ.11: ಬೆಳೆ ನಷ್ಟದಿಂದ ಕಂಗಾಲಾಗಿದ್ದ ಮಹಾರಾಷ್ಟ್ರದ 50ರ ಹರೆಯದ ರೈತನೋರ್ವ, ತನ್ನ ಸಾವಿಗೆ ಪ್ರಧಾನಿ ಮೋದಿ ಹಾಗೂ ಎನ್‌ಡಿಎ ಸರಕಾರ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಯವತ್‌ಮಾಲ್ ಜಿಲ್ಲೆಯ ರಾಜುರ್‌ವಾಡಿ ಗ್ರಾಮದ ಶಂಕರ್ ಭಾವುರಾವ್ ಚಾಯ್ರೆ ಎಂಬ 50 ವರ್ಷದ ರೈತ ಬೆಳೆನಷ್ಟಕ್ಕೆ ಒಳಗಾಗಿ, ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ವಸಂತರಾವ್ ನಾಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ  ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರಾಕರಿಸಿದ್ದಾರೆ. ಪ್ರಧಾನಿ ಮೋದಿ ಸ್ಥಳಕ್ಕೆ ಆಗಮಿಸಬೇಕು ಅಥವಾ ಶವವನ್ನು ಪಡೆಯುವ ಮೊದಲು ರಾಜ್ಯ ಸರಕಾರ ಸಂಪೂರ್ಣ ಪರಿಹಾರ ಧನವನ್ನು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ‘ವಸಂತರಾವ್ ನಾಕ್ ಸೇಟಿ ಸ್ವಾವಲಂಬನ್ ಮಿಷನ್’ನ ಅಧ್ಯಕ್ಷ ಕಿಶೋರ್ ತಿವಾರಿ, 1 ಲಕ್ಷ ರೂ. ಹಣವನ್ನು ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರ ಧನವಾಗಿ ಘೋಷಿಸಿದ್ದಾರೆ. ಅಲ್ಲದೆ ಮೃತ ರೈತನ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನಿಗೆ ಶಿಕ್ಷಣ ಪಡೆಯಲು ನೆರವು ನೀಡಲಾಗುವುದು. ಇವರಲ್ಲಿ ಯಾರಾದರೂ ಶೈಕ್ಷಣಿಕ ಅರ್ಹತೆ ಹೊಂದಿದ್ದರೆ ಅವರಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಶಂಕರ್ ಬಾವುರಾವ್ ಮೊದಲು ಮರವೊಂದರ ಗೆಲ್ಲಿಗೆ ಹಗ್ಗ ಬಿಗಿದು ನೇಣು ಹಾಕಿಕೊಳ್ಳಲು ಮುಂದಾಗಿದ್ದರು, ಆದರೆ ಹಗ್ಗ ತುಂಡಾದ ಕಾರಣ ಪ್ರಯತ್ನ ವಿಫಲವಾಗಿದೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 9 ಎಕರೆ ಪ್ರದೇಶವಿದ್ದು ಸ್ಥಳೀಯ ಸಹಕಾರಿ ಸಂಘದಿಂದ 90,000 ರೂ. ಸಾಲ ಹಾಗೂ ಖಾಸಗಿ ವ್ಯಕ್ತಿಯಿಂದ 3 ಲಕ್ಷ ರೂ. ಸಾಲ ಪಡೆದು ಹತ್ತಿ ಬೆಳೆದಿದ್ದರು. ಆದರೆ ತೀವ್ರ ಬರಪರಿಸ್ಥಿತಿಯ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News