ವಿಧಾನ ಸಭಾ ಚುನಾವಣೆ ಹಿನ್ನೆಲೆ: ದ.ಕ.ಜಿಲ್ಲಾದ್ಯಂತ ಕೇಂದ್ರ ಪಡೆಯ ಕಣ್ಗಾವಲು
ಮಂಗಳೂರು, ಎ.11: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ದ.ಕ.ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಚುನಾವಣಾಧಿಕಾರಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಇವಿಎಂ ಮತಯಂತ್ರ, ವಿವಿ ಪ್ಯಾಟ್ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಾಗೂ ರಾಜಕೀಯ, ಧಾರ್ಮಿಕ, ಸಾಮಾಜಿಕ ಸಭೆ ನಡೆಸುವುದರ ಬಗ್ಗೆಗಿನ ಇತಿಮಿತಿ ಬಗ್ಗೆ ತಿಳಿಹೇಳುವ ಕಾರ್ಯ ಮಾಡುತ್ತಿದ್ದಾರೆ.
ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಕೂಡ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುವ ಸಲುವಾಗಿ ಅಳೆದು ತೂಗಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲಾಡಳಿತವು ಸುಸೂತ್ರ ಚುನಾವಣೆ ನಡೆಸಲು ಕಂದಾಯ, ಶಿಕ್ಷಣ, ಅಬಕಾರಿ ಮತ್ತಿತರ ಇಲಾಖೆಯ ಸಹಕಾರದೊಂದಿಗೆ ಸಕಲ ಸಿದ್ಧತೆ ಮಾಡುತ್ತಿದ್ದರೆ, ಪೊಲೀಸ್ ಇಲಾಖೆಯು ಸದ್ದಿಲ್ಲದೆ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದೆ.
ಈಗಾಗಲೆ ಜಿಲ್ಲೆಗೆ ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನ 4 ಕಂಪೆನಿ ಆಗಮಿಸಿವೆ. ಆ ಪೈಕಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 3 ಕಾರ್ಯಾಚರಿಸಲಿವೆ. ಪೊಲೀಸ್ ಆಯುಕ್ತ ವ್ತಾಪ್ತಿಯಲ್ಲಿ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಮೂಡುಬಿದಿರೆ ಹಾಗೂ ಬಂಟ್ವಾಳ ಕ್ಷೇತ್ರದ ಕೆಲವು ಗ್ರಾಮಗಳು ಬರಲಿವೆ. ಉಳಿದಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ 1 ಕಂಪೆನಿ ಕಾರ್ಯಚರಿಸಲಿವೆ. ಪ್ರತಿಯೊಂದು ಕಂಪೆನಿಯಲ್ಲೂ ತಲಾ 100ರಷ್ಟು ಸಿಬ್ಬಂದಿ ವರ್ಗ ಸೇವೆ ಸಲ್ಲಿಸಲಿದ್ದಾರೆ.
ಇನ್ನು ಸಿಎಪಿಎಫ್ (ಕೇಂದ್ರೀಯ ಶಸ್ತ್ರಾಸ್ತ್ರ ಮೀಸಲು ಪಡೆ)ನ 2 ಕಂಪೆನಿ ಜಿಲ್ಲೆಗೆ ಆಗಮಿಸಿದೆ. ಇನ್ನುಳಿದಂತೆ ಜಿಲ್ಲಾ ಮತ್ತು ನಗರದ ಸಾಮಾನ್ಯ ಮತ್ತು ಮೀಸಲು ಪಡೆಯ ಪೊಲೀಸರು ಕೂಡಾ ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ.
ಚೆಕ್‌ಪೋಸ್ಟ್ ರಚನೆ: ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅದರಲ್ಲೂ ಗಡಿಭಾಗದ ನಾನಾ ಕಡೆ ಚೆಕ್‌ಪೋಸ್ಟ್ ರಚಿಸಲಾಗಿದೆ. ದಿನದ 24 ಗಂಟೆಯೂ ಇದು ಕಾರ್ಯಾಚರಿಸಲಿದ್ದು, ಎಲ್ಲಾ ವಾಹನಗಳ ಮೇಲೆ ಕಣ್ಗಾವಲಿಡಲಿದೆ. ಹಣ, ಮದ್ಯ ಸಹಿತ ಆಮಿಷ ಒಡ್ಡಲು ದಿನಬಳಕೆಯ ಸಾಮಗ್ರಿಗಳ ಸಾಗಾಟದ ಬಗ್ಗೆಯೂ ವಿಶೇಷ ಗಮನ ಹರಿಸಲಿದೆ. ಸೂಕ್ತ ದಾಖಲೆಪತ್ರಗಳಿಲ್ಲದ ಹಣ ಮತ್ತು ವಸ್ತುಗಳ ಸಾಗಾಟದ ಪ್ರಕ್ರಿಯೆ ಕಂಡು ಬಂದ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಲಿದೆ.
ಮಂಗಳೂರು, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 3 ಮತ್ತು ಸುಳ್ಯದಲ್ಲಿ 5 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಪ್ರಕ್ರಿಯೆ ಬಿರುಸು ಪಡೆಯುತ್ತಿದ್ದು, ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಕೂಡ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗುತ್ತಿದೆ.