×
Ad

ಮೂಡುಬಿದಿರೆ: ಸಂಶಯಾಸ್ಪದ ರೀತಿಯಲ್ಲಿ ಮಹಿಳೆ ಮೃತ್ಯು

Update: 2018-04-11 23:37 IST

ಮೂಡುಬಿದಿರೆ, ಎ.11 : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಗಂಟಾಲ್‌ಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೋರ್ವರು ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಆಕೆಯ ಪತಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದರಿಂದ ಹಲವು ಸಂಶಯಗಳಿಗೆ ಕಾರಣವಾಗಿದೆ.

ಗಂಟಾಲ್‌ಕಟ್ಟೆಯ ನೀರಲ್ಕೆ ನಿವಾಸಿ ಅಸ್ಲಾಂ (31) ಅವರ ಪತ್ನಿ ಕೈರುನ್ನೀಸಾ (22) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು. ಕಳೆದ ಎಂಟು ತಿಂಗಳಿನಿಂದ ಗಂಟಾಲ್‌ಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಮನೆಯೊಳಗಡೆ ಮಗು ಅಳುತ್ತಿರುವುದನ್ನು ಗಮನಿಸಿದ ಮನೆಯ ಯಜಮಾನರು ಬಂದು ನೋಡಿದಾಗ ರೂಮಿನ ಪಕ್ಕಾಸಿಗೆ ಚೂಡಿದಾರದ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಪಣಂಬೂರು ಎಸಿಪಿ ರಾಜೇಂದ್ರ, ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ದೇಜಪ್ಪ, ತಹಶೀಲ್ದಾರ್ ಶಿವ ಶಂಕರಪ್ಪ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ ಅಮ್ಮುಂಜೆಯ ನಿವಾಸಿ ಕೈರುನ್ನೀಸಾರನ್ನು ಅಸ್ಲಾಂ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಎರಡೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಅಸ್ಲಾಂ ವಾಹನದಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಸ್ಲಾಂಗೆ ಕರೆ ಮಾಡಿದಾಗ ಆತನ ಮತ್ತು ತಂದೆ ಹಾಗೂ ಅಣ್ಣನ ಮೊಬೈಲ್‌ಗಳು ಕೂಡಾ ಸ್ಚಿಚ್ ಆಫ್ ಆಗಿರುವುದರಿಂದ ಸಂಶಯಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಕೈರುನ್ನೀಸಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News