ಐಪಿಎಲ್ ಕ್ರಿಕೆಟ್: ಮಳೆ ಅಡಚಣೆ ನಡುವೆ ಪಂದ್ಯ ಗೆದ್ದ ರಾಜಸ್ಥಾನ ರಾಯಲ್ಸ್

Update: 2018-04-12 03:49 GMT

ಜೈಪುರ, ಎ.12: ಎರಡು ವರ್ಷಗಳ ನಿಷೇಧದ ಬಳಿಕ ತವರಿನಲ್ಲಿ ಮೊದಲ ಐಪಿಎಲ್ ಪಂದ್ಯವಾಡಿದ ರಾಜಸ್ಥಾನ ರಾಯಲ್ಸ್ ತಂಡ, ಮಳೆ ಅಡಚಣೆಯ ನಡುವೆಯೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು 10 ರನ್ನುಗಳಿಂದ ಸೋಲಿಸಿ ಗೆಲುವಿನ ರುಚಿ ಕಂಡಿತು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 17.5 ಓವರ್‌ಗಳಲ್ಲಿ 153 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಮಧ್ಯರಾತ್ರಿ ವೇಳೆ ಮತ್ತೆ ಪಂದ್ಯ ಆರಂಭಿಸಲಾಯಿತು. ಡೆಕ್‌ವರ್ತ್ ಲೂಯಿಸ್ ನಿಯಮದ ಅನ್ವಯ ಆರು ಓವರ್‌ಗಳಲ್ಲಿ 71 ರನ್ ಗಳಿಸುವ ಗುರಿಯನ್ನು ಡೆಲ್ಲಿ ಡೇರ್‌ಡೆವಿಲ್ ತಂಡಕ್ಕೆ ನಿಗದಿಪಡಿಸಲಾಯಿತು.  ಆದರೆ ಆರು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಲಷ್ಟೇ ಶಕ್ತವಾದ  ಡೆಲ್ಲಿ ತಂಡ ಸತತ ಎರಡನೇ ಸೋಲು ಒಪ್ಪಿಕೊಂಡಿತು.

 ಕಾಲಿನ್ ಮುನ್ರೊ ಮೊದಲ ಎಸೆತದಲ್ಲೇ ರನ್‌ಔಟ್ ಆಗುವುದರೊಂದಿಗೆ ಡೇರ್‌ಡೆವಿಲ್ಸ್ ಆಘಾತ ಅನುಭವಿಸಿತು. ಎರಡನೇ ಓವರ್‌ನಲ್ಲಿ ಕೇವಲ ಐದು ರನ್ನುಗಳನ್ನು ಬಿಟ್ಟುಕೊಡುವ ಮೂಲಕ ಧವಳ್ ಕುಲಕರ್ಣಿ ಒತ್ತಡ ಹೆಚ್ಚಿಸಿದರು. ಅಗತ್ಯವಿದ್ದ ರನ್ ರೇಟ್ ಹೆಚ್ಚುತ್ತಿದ್ದಾಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರು  ಜಯದೇವ್ ಉನದ್ಕತ್ ಅವರ ಮೂರನೇ ಓವರ್‌ನಲ್ಲಿ ಒಂದು ಸಿಕ್ಸ್ ಹಾಗೂ ಎರಡು ಬೌಂಡರಿ ಗಳಿಸಿದರು. ಆಸ್ಟ್ರೇಲಿಯಾ ಆಟಗಾರ ಅಪಾಯಕಾರಿಯಾಗುವ ಹಂತದಲ್ಲಿ ರಾಯಲ್ಸ್ ಕೀಪರ್ ಜಾಸ್ ಬಟ್ಲರ್ ಹಿಡಿದ ಅದ್ಭುತ ಕ್ಯಾಚ್‌ನಿಂದ ಡೆಲ್ಲಿ ಗೆಲುವಿನ ಆಸೆ ಮಣ್ಣುಪಾಲಾಯಿತು.

ಋಷಭ್ ಪಂತ್ ಕೂಡಾ ಐದನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ಕೊನೆ ಓವರ್‌ನಲ್ಲಿ 25 ರನ್ನುಗಳ ಗುರಿ ಪಡೆಯಿತು. ಆದರೆ ಕೇವಲ 14 ರನ್ ಗಳಿಸಿ ಡೇರ್‌ಡೆವಿಲ್ಸ್ ಸೋಲೊಪ್ಪಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News