×
Ad

ನ್ಯಾಯಕ್ಕೆ ಅಡ್ಡಿಯಾಗಲು ಅವಕಾಶ ನೀಡುವುದಿಲ್ಲ: ಮೆಹಬೂಬ

Update: 2018-04-12 18:59 IST

ಶ್ರೀನಗರ,ಎ.12:ಕಥುವಾ ಜಿಲ್ಲೆಯಲ್ಲಿ ಎಂಟರ ಹರೆಯದ ಅಲೆಮಾರಿ ಮುಸ್ಲಿಂ ಬಾಕೆರವಾಲ್ ಸಮುದಾಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕಾನೂನುಕ್ರಮಕ್ಕೆ ಬಾಧೆಯುಂಟಾಗಲು ತನ್ನ ಸರಕಾರವು ಅವಕಾಶ ನೀಡುವುದಿಲ್ಲ ಮತ್ತು ತ್ವರಿತವಾಗಿ ನ್ಯಾಯವನ್ನು ಒದಗಿಸಲಾಗುವುದು ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಗುರುವಾರ ಇಲ್ಲಿ ಹೇಳಿದರು.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜಮ್ಮುವಿನಲ್ಲಿಯ ವಕೀಲರು ಬುಧವಾರ ಬಂದ್‌ಗೆ ಕರೆ ನೀಡಿದ ಬಳಿಕ ಈ ಪ್ರಕರಣವು ವಿವಾದವನ್ನು ಸೃಷ್ಟಿಸಿದೆ.

ಜನರ ಗುಂಪೊಂದರ ಹೊಣೆಗೇಡಿ ಕೃತ್ಯಗಳು ಮತ್ತು ಹೇಳಿಕೆಗಳಿಂದ ಕಾನೂನಿಗೆ ಯಾವುದೇ ಬಾಧೆಯುಂಟಾಗುವುದಿಲ್ಲ. ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದೆ, ತನಿಖೆಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ ಮತ್ತು ಖಂಡಿತ ನ್ಯಾಯ ದೊರೆಯಲಿದೆ ಎಂದು ಮುಫ್ತಿ ಟ್ವೀಟಿಸಿದ್ದಾರೆ.

ಸೋಮವಾರ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವುದನ್ನು ತಡೆಯಲು ಕಥುವಾದಲ್ಲಿ ವಕೀಲರು ಪ್ರಯತ್ನಿಸಿದ್ದರು. ಬಾಲಕಿಯನ್ನು ಹೇಗೆ ಅಪಹರಿಸಲಾಗಿತ್ತು, ಆಕೆಗೆ ಹೇಗೆ ಮತ್ತು ಬರಿಸುವ ಔಷಧಿಗಳನ್ನು ನೀಡಲಾಗಿತ್ತು, ಕೊಲ್ಲುವ ಮೊದಲು ದೇವಸ್ಥಾನದಲ್ಲಿ ಆಕೆಯ ಮೇಲೆ ಹೇಗೆ ಅತ್ಯಾಚಾರ ನಡೆದಿತ್ತು ಎನ್ನುವುದರ ಕುರಿತು ಬೆನ್ನುಹುರಿಯಲ್ಲಿ ಚಳಿಯನ್ನು ಹುಟ್ಟಿಸುವ ವಿವರಗಳು ದೋಷಾರೋಪಣ ಪಟ್ಟಿಯಲ್ಲಿವೆ.

ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ನಡೆದಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದ ಇಬ್ಬರು ಬಿಜೆಪಿ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ್ದಕ್ಕಾಗಿ ಪ್ರತಿಪಕ್ಷ ನ್ಯಾಷನಲ್ ಕಾನ್‌ಫರೆನ್ಸ್‌ನ ನಾಯಕ ಉಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಗಳನ್ನು ಟ್ವಿಟರ್‌ನಲ್ಲಿ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News