ಕರಿಮಲೆ ಬಾಲ ಏಸು ದೇವಾಲಯ ಬೆಳ್ಳಿ ಹಬ್ಬ ಸಮಾರೋಪ
ಬಂಟ್ವಾಳ, ಎ. 12: ಆರಾಧನಾ ಕೇಂದ್ರಗಳು ಸುಸ್ಥಿತಿಯಲ್ಲಿದ್ದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಹೇಳಿದ್ದಾರೆ.
ಬಂಟ್ವಾಳ ತಾಲೂಕು ವಾಮದಪದವು ಸಮೀಪದ ಕರಿಮಲೆ ಬಾಲಯೇಸು ದೇವಾಲಯ ಬೆಳ್ಳಿಹಬ್ಬದ ಕಾರ್ಯಕ್ರಮಗಳ ಗುರುವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತ ಸಮಾಜದ ಅಭಿವೃದ್ಧಿ ಜೊತೆಗೆ ಶಿಕ್ಷಣ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕರಿಮಲೆ ಚರ್ಚ್‌ನ ಧರ್ಮಗುರು ಹಾಗೂ ಸಮಾಜ ಅಭಿನಂದನೀಯರು ಎಂದರು.
ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಫಾ. ಫ್ರಾನ್ಸಿಸ್ ಸೆರಾವೋ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೂಡಬಿದಿರೆ ವಲಯ ಮುಖ್ಯ ಧರ್ಮಗುರು ಫಾ. ಪೌಲ್ ಸಿಕ್ವೆರಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇದುವರೆಗೆ ಸೇವೆ ಸಲ್ಲಿಸಿದ ಧರ್ಮಗುರುಗಳಾದ ಫಾ. ಪೀಟರ್ ಸೆರಾವೊ, ಫಾ. ರಿಚರ್ಡ್ ಸಾಲ್ದಾನ, ಫಾ. ಅಬೆಲ್ ಲೋಬೊ ಅವರನ್ನು ಮತ್ತು ಕರಿಮಲೆ ಚರ್ಚ್ ಧರ್ಮಗುರು ಫಾ. ಸಿಲ್ವೆಸ್ಟರ್ ಡಿಕೋಸ್ತಾ ಅವರನ್ನು ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ "ಝಳಕ್" ಬಿಡುಗಡೆ ಗೊಳಿಸಲಾಯಿತು. ಚರ್ಚ್ ಧರ್ಮಗುರು ಫಾ. ಸಿಲ್ವೆಸ್ಟರ್ ಡಿಕೋಸ್ತಾ ಸ್ವಾಗತಿಸಿ, ಪ್ರಸ್ತಾವಿಸಿ ಮಾತನಾಡಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ರಿಚ್ಚರ್ಡ್ ಡಿಸೊಜಾ ವರದಿ ವಾಚಿಸಿದರು. ಉಪಾಧ್ಯಕ್ಷ ವಲೇರಿಯನ್ ಡಿಸೋಜ ವಂದಿಸಿದರು. ರಾಜೇಶ್ ಡಿಸೋಜ ಮತ್ತು ಜಾಕ್ಸನ್ ಡಿಕೋಸ್ತಾ ನಿರೂಪಿಸಿದರು.
ಬೆಳಗ್ಗೆ ಚರ್ಚ್‌ನಲ್ಲಿ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ದಿವ್ಯ ಬಲಿಪೂಜೆ ನೆರವೇರಿಸಿದರು. ಸಚಿವ ಬಿ. ರಮಾನಾಥರೈ ಹಾಗೂ ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.