ಎ.13ರಿಂದ ಪುತ್ತೂರು ಜಾತ್ರಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು, ಎ. 12: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿನ ವೇದಿಕೆಯಲ್ಲಿ ಕಳೆದ ವರ್ಷದಿಂದ ಆರಂಭಗೊಂಡ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಈ ವರ್ಷವೂ ನಡೆಯಲಿದ್ದು, ಎ.13ರಿಂದ 19ರ ತನಕ ಪ್ರತಿದಿನ ಸಂಜೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಎ.13ಕ್ಕೆ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತಾಳಮದ್ದಳೆ, ಎ.14ರಂದು ವಜ್ರಮಾತಾ ಭಜನಾ ಮಂಡಳಿ, ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ, ಕವಿತಾ ದಿನಕರ್ ಪಡೀಲ್ ಅವರಿಂದ ಭಜನೆ, ಮಾ. ಶಾಶ್ವತ್ ಅವರಿಂದ ಸಂಗೀತ ಕಚೇರಿ, ಕಲಾರಾಧನೆ ಮತ್ತು ಬಾರಿಸು ಕನ್ನಡ ಡಿಂಡಿಮ ಬಳಗದಿಂದ ನೃತ್ಯ ಸಂಗೀತ ವೈವಿಧ್ಯ ನಡೆಯಲಿದೆ.
ಎ.15ರಂದು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ, ಎ.16ರಂದು ಸಾರಸ್ವತ ಸ್ವರ ಸಂಗೀತ ಬಳಗದಿಂದ ಭಜನೆ, ವಕೀಲರ ಸಂಘ ಮತ್ತು ಶ್ರವಣ ರಂಗ ಪ್ರತಿಷ್ಠಾನ ಸವಣೂರು ಇವರಿಂದ ನಾಟಕ, ವೈಷ್ಣವಿ ನಾಟ್ಯಾಲಯದಿಂದ ನೃತ್ಯ, ದೀಕ್ಷಾ ಡಿ ರೈ ಬಳಗದಿಂದ ನೃತ್ಯ ವೈವಿಧ್ಯ ಹಾಗೂ ಚಂದ್ರಶೇಖರ್ ಹೆಗ್ಡೆ ಬಳಗದಿಂದ ಸಂಗೀತ ರಸಮಂಜರಿ ನಡೆಯಲಿದೆ.
ಎ.18ರಂದು ದಾಸ ಸಂಕೀರ್ತನ ಬಳಗ ಮತ್ತು ಶ್ರೀದೇವಿ ಭಜನಾ ಮಂಡಳಿ ಚೊಕ್ಕಾಡಿ, ವಿಶ್ವಕರ್ಮ ಭಜನಾ ಮಂಡಳಿಯಿಂದ ಭಜನೆ, ಪುಣಚ, ಸ್ನೇಹ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳಲಿದೆ. ಎ.19ರಂದು ಬೊಳುವಾರು ವೈದೇಹಿ ಭಜನಾ ಮಂಡಳಿಯಿಂದ ಭಜನೆ, ನಯನಾ ವಿ ರೈ ಅವರಿಂದ ನೃತ್ಯ ಹಾಗೂ ಯಕ್ಷಗಾನ ಕಲಾವರ್ದಿನಿ ಸಭಾ ಕೆದಿಲ ಇದರ ವತಿಯಿಂದ ಯಕ್ಷಗಾನ, ಗಾನ ವೈಭವ ಜರಗಲಿದೆ ಎಂದು ಅವರು ತಿಳಿಸಿದ್ದಾರೆ.