“ಭಾರತದ ಧಾರ್ಮಿಕ ಸಂಘರ್ಷಕ್ಕೆ ಕೈಗನ್ನಡಿಯಾದ ಕಥುವಾ ಅತ್ಯಾಚಾರ, ಕೊಲೆ ಪ್ರಕರಣ”
ಹೊಸದಿಲ್ಲಿ, ಎ.12: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರ ರೀತಿಯಲ್ಲಿ ಹಿಂಸಿಸಿ ಕೊಲೆಗೈದ ಪ್ರಕರಣವು ಭಾರತವು ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಹೊಂದಿರುವ ಕುಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಜಗಜ್ಜಾಹೀರುಗೊಳಿಸಿದೆ .
ಬಖೇರ್‌ವಾಲ್ ಮುಸ್ಲಿಂ ಅಲೆಮಾರಿ ಗುಂಪನ್ನು ಜಮ್ಮು ಬಳಿಯ ಕಥುವಾದಿಂದ ಓಡಿಸುವ ಸಲುವಾಗಿ ಈ ಪೈಶಾಚಿಕ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ಬೀಭತ್ಸ ಅಪರಾಧ ಪ್ರಕರಣ ಜಮ್ಮು-ಕಾಶ್ಮೀರವನ್ನು ಕೋಮುವಾದದ ಗೆರೆಯಡಿ ಹೇಗೆ ವಿಭಜಿಸಿದೆ ಮತ್ತು ಈ ಪ್ರಕರಣ ಭಾರತದಲ್ಲಿ ನಡೆಯುತ್ತಿರುವ ಧರ್ಮಗಳ ನಡುವಿನ ಯುದ್ಧಗಳಿಗೆ ಮತ್ತೊಂದು ರಣಕಣವನ್ನು ಕಲ್ಪಿಸಿಕೊಟ್ಟಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಘಟನೆಯ ವರದಿಯಲ್ಲಿ ತಿಳಿಸಲಾಗಿದೆ.
ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಬಿಜೆಪಿ ಶಾಸಕ 17ರ ಹರೆಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿರುವಾಗಲೇ ಕಥುವಾದಲ್ಲಿ ಪೈಶಾಚಿಕ ಕೃತ್ಯ ನಡೆದಿರುವುದನ್ನು ಈ ಮಾಧ್ಯಮಗಳು ಉಲ್ಲೇಖಿಸಿವೆ. ಕಥುವಾ ಪ್ರಕರಣದ ಬಗ್ಗೆ ವಿದೇಶದ ಕೆಲವು ಮಾಧ್ಯಮಗಳಲ್ಲಿ ವಿವರವಾದ ವರದಿ ಪ್ರಕಟವಾಗಿದೆ .
ನ್ಯೂಯಾರ್ಕ್ ಟೈಮ್ಸ್:
ಪತ್ರಿಕೆಯ ದಕ್ಷಿಣ ಏಶ್ಯಾ ವರದಿಗಾರ ಜೆಫ್ರಿ ಜೆಟ್ಲ್‌ಮನ್ ಅವರು ಸಿದ್ಧಪಡಿಸಿದ ವರದಿಯನ್ನು ಪತ್ರಿಕೆ ಪ್ರಕಟಿಸಿದ್ದು “ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರತದಲ್ಲಿ ಧಾರ್ಮಿಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ ಎಂದಿದೆ. ಇದು ಭಾರತದಲ್ಲಿ ನಡೆದ ಮತ್ತೊಂದು ಭೀಬತ್ಸ ಲೈಂಗಿಕ ಹಿಂಸಾಚಾರದ ಪ್ರಕರಣವಾಗಿದೆ . ದುರ್ಬಲ ಬಾಲಕಿಯ ಮೇಲೆ ಕ್ರೂರ ವ್ಯಕ್ತಿಗಳು ನಡೆಸಿದ ಪೈಶಾಚಿಕ ಕೃತ್ಯವು ಭಾರತದಲ್ಲಿ ನಡೆಯುತ್ತಿರುವ ಧರ್ಮಗಳ ನಡುವಿನ ಯುದ್ಧಗಳಿಗೆ ಮತ್ತೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ . ಹಿಂದೂ ರಾಷ್ಟ್ರೀಯತಾವಾದಿಗಳು ಈ ಬಗ್ಗೆ ಧ್ವನಿ ಎತ್ತಿದರು. ಆದರೆ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬುದು ಇವರ ಆಗ್ರಹವಾಗಿಲ್ಲ. ಆರೋಪಿಗಳನ್ನು ಸಮರ್ಥಿಸಿಕೊಳ್ಳಲು ಇವರು ಧಾವಿಸಿದರು. ಈ ಪ್ರಕರಣದಲ್ಲಿ ಬಂಧಿತರಾಗಿರುವವರೆಲ್ಲರೂ ಹಿಂದೂಗಳು. ಆದರೆ ಸಂತ್ರಸ್ತ ಅಲೆಮಾರಿ ಬಖೇರ್‌ವಾಲ್‌ಗಳು ಮುಸ್ಲಿಮರಾಗಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆ :
ಪತ್ರಿಕೆಯಲ್ಲಿ ವರದಿ ಪ್ರಕಟಿಸಿರುವ ಮಾಲ್ವಾ ಎಲ್ಟಾಗುರಿ, “ಈ ಪ್ರಕರಣ ಹಿಂದೂ ಮುಸ್ಲಿಮ್ ಸಮುದಾಯದ ಮಧ್ಯೆ ಪ್ರಕ್ಷುಬ್ಧತೆ ಹೆಚ್ಚಲು ಹೇಗೆ ಕಾರಣವಾಗಿದೆ ಎಂದು ವಿವರಿಸಿದ್ದಾರೆ. ಭಾರತದಲ್ಲಿರುವ ಧಾರ್ಮಿಕ ಸಂಘರ್ಷದ ಸ್ಥಿತಿಗೆ ಈ ಪ್ರಕರಣ ಇತ್ತೀಚಿನ ಉದಾಹರಣೆಯಾಗಿದೆ. ಕೆಲವರು ಲೈಂಗಿಕ ಹಿಂಸೆಯನ್ನು ಖಂಡಿಸಿ, ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದರೆ, ಇನ್ನು ಕೆಲವರು ಆರೋಪಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ. ‘ವೇಪೊ’ ಪತ್ರಿಕೆಯ ಅಂಕಣದಲ್ಲಿ ಭಾರತೀಯ ಪತ್ರಕರ್ತೆ ಬರ್ಖಾ ದತ್ ಹೀಗೆ ಬರೆದಿದ್ದಾರೆ. “ಈ ವಾರ ಅತ್ಯಾಚಾರ ನಡೆಸಿದ ಎರಡು ಪ್ರಕರಣ ನಡೆದಿದೆ. ಒಂದು ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಕುದುರೆ ಮೇಯಿಸುವ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಇನ್ನೊಂದು ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದ ಅತ್ಯಾಚಾರದ ಘಟನೆ.ಇವೆರಡೂ ರಾಷ್ಟ್ರೀಯ ಅಪಮಾನದ ಕ್ಷಣಗಳಾಗಿವೆ. ಅಧಿಕಾರದಲ್ಲಿರುವವರು ಅತ್ಯಾಚಾರ ಆರೋಪಿಗಳ ರಕ್ಷಣೆಗೆ ಯಾವ ರೀತಿ ಪಿತೂರಿ ನಡೆಸುತ್ತಾರೆ ಎಂಬುದನ್ನು ಈ ಎರಡು ಪ್ರಕರಣಗಳು ದೃಢೀಕರಿಸಿವೆ. ಅಲ್ಲದೆ ಭಾರತದ ದುರ್ಬಲತೆಯನ್ನೂ ತೋರಿಸಿಕೊಟ್ಟಿದೆ. ಈ ಘಟನೆ ಕುರಿತು ವ್ಯಕ್ತವಾಗಿರುವ ರಾಜಕೀಯ ಹಾಗೂ ಸಾಮಾಜಿಕ ಪ್ರತಿಕ್ರಿಯೆ ದೇಶದಲ್ಲಿ ನೆಲೆಸಿರುವ ಸ್ತ್ರೀದ್ವೇಷ, ಧಾರ್ಮಿಕ ದ್ವೇಷ ಹಾಗೂ ವರ್ಗ ಪಕ್ಷಪಾತಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಬರೆದಿದ್ದಾರೆ.
ದಿ ಅಸೋಸಿಯೇಟೆಡ್ ಪ್ರೆಸ್:
ಪ್ರಕಟವಾದ ವರದಿ ಕಥುವಾ ಅತ್ಯಾಚಾರ ಪ್ರಕರಣ ಹಾಗೂ 2012ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ನಡೆದ ಪ್ರತಿಭಟನೆಯ ನಡುವಿರುವ ಭಿನ್ನತೆಯನ್ನು ಗಮನಿಸಿದೆ. “ಕಾಶ್ಮೀರದ ಕಥುವಾದಲ್ಲಿ ದೇವಸ್ಥಾನದ ಒಳಗೆ ಮುಸ್ಲಿಮ್ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದ ಬಳಿಕ ಆಡಳಿತ ಪಕ್ಷದೊಂದಿಗೆ ಸಂಪರ್ಕ ಇರುವ ಸಾವಿರಾರು ಮಂದಿ ಹಿಂದೂ ಮೂಲಭೂತವಾದಿಗಳು ಆರು ಮಂದಿ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆರೋಪಿಗಳಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದ್ದು ಇವರು ಅಮಾಯಕರೆಂದು ನೂರಾರು ಹಿಂದೂ ವಕೀಲರು ಪ್ರತಿಭಟನೆ ನಡೆಸಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಬಿಸಿ:
ಬಾಲಕಿ ನಾಪತ್ತೆಯಾದ ಬಳಿಕ ನಡೆದ ಘಟನೆಯನ್ನು ಸವಿವರವಾಗಿ ಬಿಬಿಸಿ ವರದಿ ಮಾಡಿದೆ. ಈ ದುಷ್ಕೃತ್ಯದಿಂದ ಸಮುದಾಯಕ್ಕೆ ಆಘಾತವಾಗಿದ್ದು, ಹಿಂದೂ ಬಾಹುಳ್ಯವಿರುವ ಜಮ್ಮುವಿನಲ್ಲಿ ಹಾಗೂ ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರ ಕಣಿವೆಯಲ್ಲಿ ಎರಡು ಸಮುದಾಯದ ನಡುವಿರುವ ಭಿನ್ನಾಭಿಪ್ರಾಯವನ್ನು ಈ ಪ್ರಕರಣ ಜಾಹೀರುಗೊಳಿಸಿದೆ ಎಂದು ವರದಿ ಮಾಡಿದೆ.
ದಿ ಏಶ್ಯಾ ಟೈಮ್ಸ್:
ಇಡೀ ಪ್ರಕರಣದ ವಿವರ ಮಸುಕಾಗಿದೆ ಎಂದು ‘ದಿ ಏಶ್ಯಾ ಟೈಮ್ಸ್’ ವರದಿ ಮಾಡಿದೆ. ಸಂತ್ರಸ್ತೆಯ ಸಮುದಾಯದವರು ವಾಸಿಸುತ್ತಿರುವ ಜಮೀನಿನ ಮೇಲೆ ‘ವಿರೋಧಿ’ ಹಿಂದೂಗಳು ಕಣ್ಣಿಟ್ಟಿದ್ದರು ಎಂಬ ವರದಿಗಳ ಮಧ್ಯೆಯೇ ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆಯನ್ನು ಅಚ್ಚರಿಯ ರೀತಿಯಲ್ಲಿ ಅಡಗಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರದೇಶದಲ್ಲಿ ಅಲೆಮಾರಿ ಮುಸ್ಲಿಮ್ ಪಂಗಡ ಹಾಗೂ ಹಿಂದೂಗಳ ಮಧ್ಯೆ ಇರುವ ಐತಿಹಾಸಿಕ ವಿವಾದದ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. ಸಂತ್ರಸ್ತೆಯ ಪರವಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ತಾಲಿಬ್ ಹುಸೈನ್ ಹೇಳುವಂತೆ, ಇಲ್ಲಿರುವ ಶೇ.90ರಷ್ಟು ಭೂಮಿ ‘ಕಸ್ಟೋಡಿಯನ್’ ಆಸ್ತಿಯಾಗಿದ್ದು ಇದು ಸಂಪೂರ್ಣವಾಗಿ ಬಹುಸಂಖ್ಯಾತ ವರ್ಗದವರ ಕೈಯಲ್ಲಿದೆ. ಕಳೆದ ಮೂರು-ನಾಲ್ಕು ವರ್ಷದಿಂದ ಇಲ್ಲಿ ಭೂಮಿಯ ಒಡೆತನದ ಕುರಿತ ವಿವಾದ ತಾರಕಕ್ಕೇರಿದ್ದು ಜಮೀನಿಗೆ ಜಾತಿಯ ಆಧಾರದಲ್ಲಿ ಗಡಿರೇಖೆಗಳನ್ನು ಗುರುತಿಸುವಂತಾಗಿದೆ. ಒಂದು ಸಮುದಾಯದ ವ್ಯಕ್ತಿಯ ಹಸು ಇನ್ನೊಂದು ಸಮುದಾಯದವರಿಗೆ ಸೇರಿದ ಭೂಮಿಗೆ ಮೇಯಲೆಂದು ಹೋದರೆ, ಅದು ಬಳಿಕ ವಾಪಾಸಾಗುವುದಿಲ್ಲ. ಹೀಗಿರುವಾಗ ಮನುಷ್ಯರ ವಿಷಯದಲ್ಲಿ ಏನಾದರೂ ಹೇಳುವ ಅಗತ್ಯವಿದೆಯೇ ಎಂದು ಹುಸೇನ್ ಪ್ರಶ್ನಿಸುತ್ತಾರೆ.