×
Ad

ಭಿನ್ನಮತೀಯರ ರಾಜೀನಾಮೆಯಿಂದ ಪರಿಣಾಮ ಎಷ್ಟು ಎಂಬುದು ಎಲ್ಲರಿಗೂ ಗೊತ್ತಿದೆ: ಹಾಲಾಡಿ

Update: 2018-04-12 20:54 IST

ಉಡುಪಿ, ಎ.12: ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಪಕ್ಷದಲ್ಲಿರುವ ಎಲ್ಲರು ಪಕ್ಷದ ಪರವಾಗಿ ಕೆಲಸ ಮಾಡುವುದು ಅವರ ಧರ್ಮ. ನನ್ನ ಆಯ್ಕೆ ವಿರೋಧಿಸಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದವರಿಂದ ನನಗೆ ಏನು ಪರಿಣಾಮ ಬೀಳುವುದಿಲ್ಲ ಎಂದು ಹೇಳಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಯ್ಕೆ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿರುವವರ ವಿಚಾರ ಪಕ್ಷದ ಪದಾಧಿಕಾರಿಗಳಿಗೆ ಸಂಬಂಧಪಟ್ಟದ್ದು. ಅವರೇ ಅದನ್ನು ಸರಿ ಮಾಡುತ್ತಾರೆ. ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದೆ ಹೋಗುತ್ತೇನೆ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಸ್ಪರ್ಧಿಸಿದ್ದರು. ಈಗ ರಾಜೀನಾಮೆ ಕೊಟ್ಟವರಲ್ಲಿ ಕೆಲವರು ನಾನು ಪಕ್ಷೇತರನಾಗಿ ಸ್ಪರ್ಧಿಸಿದಾಗ ನನ್ನ ಜೊತೆ ಇದ್ದರು ಎಂದ ಅವರು, ಜಯಪ್ರಕಾಶ್ ಹೆಗ್ಡೆ ಆಕಾಂಕ್ಷಿಯಾಗಿ ಟಿಕೆಟ್ ಕೇಳುವುದು ಪ್ರಜಾಪ್ರಭುತ್ವದಲ್ಲಿ ಅವರ ಹಕ್ಕು. ನೀಡುವುದು ಬಿಡುುದು ಪಕ್ಷಕ್ಕೆ ಬಿಟ್ಟದ್ದು ಎಂದರು.

ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ಕ್ಷೇತ್ರದ ಜಿಪಂ, ತಾಪಂ ಸದಸ್ಯರುಗಳು ನನ್ನ ಜೊತೆ ಇದ್ದಾರೆ. ಅವರ ಅಭಿಪ್ರಾಯದಂತೆ ನಾನು ಈ ಬಾರಿ ಸ್ಪರ್ಧಿಸುತ್ತಿದ್ದೇನೆ ಹೊರತು ನಾನೇ ನಿರ್ಧಾರ ತೆಗೆದುಕೊಂಡದ್ದಲ್ಲ. ನಾನು ಮಾಡಿದ ಅಭಿವೃದ್ಧಿ, ಸಾಮಾಜಿಕ ನ್ಯಾಯವೇ ನನಗೆ ಶ್ರೀರಕ್ಷೆ ಎಂದು ಹಾಲಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News