ಬಿಜೆಪಿ ಶಾಸಕನನ್ನು ಬಂಧಿಸಿಲ್ಲ ಯಾಕೆ : ಉ. ಪ್ರದೇಶ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಲಕ್ನೊ, ಎ.12: ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಶಾಸಕನನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ರಾಜ್ಯ ಸರಕಾರ ಪ್ರಕರಣವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಆರೋಪಿ ಶಾಸಕರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರೂ ಅವರನ್ನು ಇನ್ನೂ ಯಾಕೆ ಬಂಧಿಸಿಲ್ಲ . ಸರಕಾರ ಆರೋಪಿಯನ್ನು ಬಂಧಿಸುತ್ತದೆಯೇ ಎಂಬ ಬಗ್ಗೆ ಉತ್ತರಿಸುವಂತೆ ಸರಕಾರದ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ಉ.ಪ್ರದೇಶದ ಬಂಗಾರ್‌ಮಾವು ಕ್ಷೇತ್ರದ ಶಾಸಕ ಕುಲ್‌ದೀಪ್ ಸಿಂಗ್ ವಿರುದ್ಧ ಉನ್ನಾವೊದ ಮಾಖಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಬೆದರಿಕೆ ಹಾಗೂ ಅತ್ಯಾಚಾರದ ಆರೋಪ ಹೊರಿಸಲಾಗಿದೆ. ಅಲ್ಲದೆ ಪೋಸ್ಕೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದ್ದು, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾದರೆ ತಕ್ಷಣ ಆರೋಪಿಯನ್ನು ಬಂಧಿಸಬೇಕು.
ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಎರಡೂ ಕಡೆಯವರ ಹೇಳಿಕೆಯನ್ನು ನಾವು ಆಲಿಸಬೇಕು. ಅಲ್ಲದೆ ಈಗ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿರುವ ಕಾರಣ, ಬಂಧನದ ಬಗ್ಗೆ ಅವರೇ ನಿರ್ಧರಿಸಬೇಕು ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ತಿಳಿಸಿದ್ದಾರೆ. ಯಾವುದಾದರೂ ಪುರಾವೆ ದೊರೆತರೆ ಆಗ ಆರೋಪಿಯನ್ನು ಬಂಧಿಸುವ ಬಗ್ಗೆ ಸಿಬಿಐ ನಿರ್ಧರಿಸಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಆರೋಪಿ ಶಾಸಕನನ್ನು ಬಂಧಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ, ತನ್ನ ಚಿಕ್ಕಪ್ಪನಿಗೆ ಜೀವ ಬೆದರಿಕೆ ಇರುವ ಕಾರಣ ಅತ್ಯಾಚಾರ ಆರೋಪಿ ಶಾಸಕನನ್ನು ತಕ್ಷಣ ಬಂಧಿಸಬೇಕೆಂದು ಅತ್ಯಾಚಾರ ಸಂತ್ರಸ್ತೆ ಒತ್ತಾಯಿಸಿದ್ದಾಳೆ.
ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೇಂಗರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 17ರ ಹರೆಯದ ಯುವತಿ ದೂರು ನೀಡಿದ್ದಳು. ದೂರಿಗೆ ಪ್ರತಿಕ್ರಿಯೆ ನೀಡಿದ್ದ ಉತ್ತರ ಪ್ರದೇಶ ಸರಕಾರ ಆರೋಪಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಿಬಿಐ ನಿರ್ಧರಿಸಲಿದೆ ಎಂದು ತಿಳಿಸಿತ್ತು.
ಸಿಬಿಐ ತನಿಖೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಆರೋಪಿಯನ್ನು ಮೊದಲು ಬಂಧಿಸಬೇಕು. ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿರುವುದೇಕೆ ಎಂದು ಸಂತ್ರಸ್ತೆ ವರದಿಗಾರರನ್ನು ಪ್ರಶ್ನಿಸಿದ್ದಾಳೆ. ಶಾಸಕ ಮತ್ತಾತನ ಸಹವರ್ತಿಗಳು ಈಗಾಗಲೇ ನನ್ನ ತಂದೆಯನ್ನು ಕೊಲೆ ಮಾಡಿದ್ದಾರೆ. ಇನ್ನು ಅವರು ನನ್ನ ಚಿಕ್ಕಪ್ಪನನ್ನೂ ಬಿಡುವುದಿಲ್ಲ ಎಂದು ಯುವತಿ ಹೇಳಿದಳು.
ಆರೋಪಿ ಶಾಸಕನ ಬಂಧನವಾದರೆ ಮಾತ್ರ ತನಗೆ ಸಮಾಧಾನವಾಗುತ್ತದೆ. ಬಿಜೆಪಿ ಸರಕಾರ ನ್ಯಾಯದ ಪರ ಇದೆ ಎಂದು ಆಗ ಭಾವಿಸಬಹುದು. ಸಿಬಿಐ ಈ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಇಲ್ಲವಾದರೆ ನ್ಯಾಯ ಸಿಗದು ಎಂದು ಕಣ್ಣೀರುಗರೆಯುತ್ತಾ ಹೇಳಿದ ಯುವತಿ ಪ್ರಜ್ಞೆ ತಪ್ಪಿ ಬಿದ್ದಳು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಮೋದಿ ಮೌನ: ಕಾಂಗ್ರೆಸ್ ತರಾಟೆ
ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ. ಹೊಸದಿಲ್ಲಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧದ ಬಗ್ಗೆ ಮೋದಿ ಅವರು ಗಂಭೀರವಾಗಿಲ್ಲ ಎಂದರು.
ಅತ್ಯಾಚಾರ ಪ್ರಕರಣಗಳ ಕುರಿತು ಉಪವಾಸ ಆಚರಿಸುವಂತೆ ಹಾಗೂ ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪ್ರತಿಭಟನೆ ನಡೆಸುವಂತೆ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.