×
Ad

ಟಿಕೆಟ್ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ: ಸುಕುಮಾರ್ ಶೆಟ್ಟಿ

Update: 2018-04-12 20:56 IST

ಉಡುಪಿ, ಎ.12: ‘ನನ್ನ ಹೊರತು ಬೇರೆಯವರಿಗೆ ಟಿಕೆಟ್ ನೀಡಿದರೆ ಆ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಆದರೆ ಟಿಕೆಟ್ ಸಿಕ್ಕಿಲ್ಲ ಅಂತ ನಾನು ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ’ ಎಂದು ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಾಸಕರು, ಮಾಜಿ ಶಾಸಕರುಗಳ ಹೆಸರುಗಳಿವೆ. ಎರಡನೆ ಪಟ್ಟಿಯಲ್ಲಿ ನಮ್ಮ ಹೆಸರು ಬಂದರೂ ನಾವು ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ನಾವು ಕೆಲಸ ಮಾಡಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಆದುದರಿಂದ ನಮಗೆ ಟಿಕೆಟ್ ಸಿಗುತ್ತದೆ ಎಂದರು. 

ಕುಂದಾಪುರ ಬಿಜೆಪಿ ಮುಖಂಡರ ರಾಜೀನಾಮೆ ಬೈಂದೂರು ಕ್ಷೇತ್ರಕ್ಕೂ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ, ಬೈಂದೂರು ಕ್ಷೇತ್ರಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಸೋಲಿಸಲು ಯಾರಿಗೂ ಆಗಲ್ಲ. ಅವರು ಬಿಜೆಪಿಗೆ ಬಂದಿರು ವುದರಿಂದ ಬೈಂದೂರು ಕ್ಷೇತ್ರದ ಬಿಜೆಪಿಗೂ ತುಂಬಾ ಲಾಭವಾಗುತ್ತದೆ ಎಂದು ತಿಳಿಸಿದರು.

ಬೈಂದೂರಿನಲ್ಲಿ ಬಿಜೆಪಿಗೆ ಸಮೃದ್ಧ ವಾತಾವರಣ ಕಂಡುಬರುತ್ತಿದೆ. ಬೈಂದೂರಿನ ಈಗಿನ ಶಾಸಕರು ಕಳೆದ 18ವರ್ಷ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಬೈಂದೂರು ಉಡುಪಿ ಜಿಲ್ಲೆಯಲ್ಲಿಯೇ ಅತಿ ಹಿಂದುಳಿದ ವಿಧಾನ ಸಭಾ ಕ್ಷೇತ್ರ. ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಈಗಲೂ ಇದೆ. ಆದ್ದರಿಂದ 18 ವರ್ಷಗಳ ಕಾಲ ಶಾಸಕರಾಗಿ ಗೋಪಾಲ ಪೂಜಾರಿ ಮಾಡಿದ್ದೇನು ಎಂದು ಅವರು ಪ್ರಶ್ನಿಸಿದರು.
 

‘ಹೆಗ್ಡೆ ಬೈಂದೂರಿಗೆ ಬರಲೇ ಇಲ್ಲ’

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಇನ್ನು ಉಳಿದ 25 ದಿನಗಳಲ್ಲಿ ಬೈಂದೂರು ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡಲು ಆಗುತ್ತದೆಯೇ. ಇಲ್ಲಿರುವ 243 ಬೂತ್‌ಗಳಿಗೆ ಭೇಟಿ ನೀಡಿ ಅವರನ್ನು ಪರಿಚಯ ಮಾಡಲು ಸಾಧ್ಯವೇ. ಅವರು ಬೈಂದೂರು ಕ್ಷೇತ್ರಕ್ಕೆ ಬರಲೇ ಇಲ್ಲ. ಬೈಂದೂರು ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಬುದ್ದಿವಂತರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಯಾರು ಸೂಕ್ತ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News