ಗೋರಕ್ಷಕರಿಂದ ವ್ಯಾಪಾರಿ, ಬಾಲಕನ ಹತ್ಯೆ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಹಲವು ಲೋಪಗಳು
ರಾಂಚಿ, ಎ.12: ಜಾರ್ಖಂಡ್‌ನ ಲಾಟೆಹರ್ ಜಿಲ್ಲೆಯಲ್ಲಿ 2016ರ ಮಾರ್ಚ್‌ನಲ್ಲಿ ಗೋಸಾಗಾಟಗಾರರ ಮೇಲೆ ದಾಳಿ ನಡೆಸಿ ಅವರನ್ನು ಭೀಕರವಾಗಿ ಹತ್ಯೆ ಮಾಡಲ್ಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಹತ್ತು ವಿವಿಧ ಮಾನವಹಕ್ಕು ಸಂಸ್ಥೆಗಳು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡನನ್ನು ಬಂಧಿಸುವಂತೆ ಆಗ್ರಹಿಸಿವೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಗಳ ಆಧಾರದಲ್ಲಿ ಈ ಪ್ರಕರಣವನ್ನು ತನಿಖೆ ನಡೆಸಲು ಪೊಲೀಸರು ವಿಫಲವಾಗಿರುವುದಲ್ಲದೆ ಆರೋಪಿಗಳ ವಿರುದ್ಧ ಸೂಕ್ತ ದೂರು ದಾಖಲಿಸಿಕೊಳ್ಳಲೂ ವಿಫಲವಾಗಿದ್ದಾರೆ ಎಂದು ಮಾನವ ಹಕ್ಕುಗಳ ನೀಡಿರುವ ವರದಿ ತಿಳಿಸಿದೆ. ಇದರ ಪರಿಣಾಮವಾಗಿ ಆರೋಪಿಗಳು ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆಯಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.
2016ರ ಮಾರ್ಚ್‌ನಲ್ಲಿ ಜಾನುವಾರು ವ್ಯಾಪಾರಿಗಳಾದ ಮಝ್ಲೂಮ್ ಅನ್ಸಾರಿ ಮತ್ತು ಶಾಲಾಬಾಲಕ ಇಮ್ತಿಯಾಝ್ ಖಾನ್ ಪಕ್ಕದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನುವಾರು ಜಾತ್ರೆಗೆ ತೆರಳುತ್ತಿದ್ದ ವೇಳೆ ಅವರನ್ನು ಗೋರಕ್ಷಕರ ತಂಡ ಅಪಹರಿಸಿತ್ತು. ನಂತರ ಅವರ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಅವರ ಮೃತದೇಹಗಳನ್ನು ಮರಕ್ಕೆ ನೇತು ಹಾಕಲಾಗಿತ್ತು. ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗಾರರು ಮೂರು ಪ್ರತ್ಯಕ್ಷದರ್ಶಿಗಳ ಜೊತೆ ಮಾತನಾಡಿದ್ದರು. ಈ ಪೈಕಿ ಒಬ್ಬಾತ ಎಂಟು ಆರೋಪಿಗಳ ಪೈಕಿ ಐವರ ಹೆಸರುಗಳನ್ನು ತಿಳಿಸಿದ್ದರೆ ಇನ್ನೋರ್ವ, ಸ್ಥಳೀಯ ಬಿಜೆಪಿ ನಾಯಕ ವಿನೋದ್ ಪ್ರಜಾಪತಿ ಕೂಡಾ ಈ ಹತ್ಯೆಯಲ್ಲಿ ಭಾಗಿಯಾಗಿದ್ದುದಾಗಿ ತಿಳಿಸಿದ್ದರು. ಎಫ್‌ಐಆರ್‌ನಲ್ಲಿ ಪ್ರಜಾಪತಿಯ ಹೆಸರನ್ನು ಮಾತ್ರ ಸೇರಿಸಲಾಗಿದ್ದರೂ ಅವರನ್ನು ಪ್ರಶ್ನಿಸುವ ಅಥವಾ ಬಂಧಿಸುವ ಗೋಜಿಗೆ ಪೊಲೀಸರು ಹೋಗಿಲ್ಲ ಎಂದು ಮಾನವಹಕ್ಕು ಸಂಸ್ಥೆಗಳು ಆರೋಪಿಸಿವೆ.
ಆರೋಪಿಗಳಿಗೆ ಸಂತ್ರಸ್ತರ ಮೊದಲೇ ಪರಿಚಯವಿತ್ತು. ಈ ಹಿಂದೆಯೂ ಜಾನುವಾರು ವ್ಯಾಪಾರ ಕೆಲಸವನ್ನು ನಿಲ್ಲಿಸುವಂತೆ ಇಲ್ಲವಾದಲ್ಲಿ ಹತ್ಯೆ ಮಾಡುವುದಾಗಿ ಅವರಿಗೆ ಬೆದರಿಕೆ ಹಾಕಲಾಗಿತ್ತು. ಹಾಗಾಗಿ ಈ ಹತ್ಯೆಯು ಪೂರ್ವಯೋಜಿತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪ್ರಕರಣದ ಸಾಕ್ಷಿದಾರರು ತನಿಖಾ ತಂಡಕ್ಕೆ ತಿಳಿಸಿದ್ದರು.
ಅದಾಗ್ಯೂ, ಆರೋಪಿಗಳ ವಿರುದ್ಧ ಅಪರಾಧಿ ಪಿತೂರಿ ಅಥವಾ ಅಪಹರಣದಂಥ ಪ್ರಕರಣಗಳನ್ನು ದಾಖಲಿಸಲಾಗಿಲ್ಲ. ಆರೋಪಿಗಳ ವಿರುದ್ಧ ಸೆಕ್ಷನ್ 302ರಡಿ ಹತ್ಯೆ ಆರೋಪವನ್ನು ಹೊರಿಸಲಾಗಿದ್ದರೂ ಅವರಿಗೆ ಜಾಮೀನು ನೀಡಲಾಗಿದೆ ಎಂದು ಸಂಸ್ಥೆಗಳ ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ವಿನೋದ್ ಪ್ರಜಾಪತಿಯನ್ನು ಕೂಡಲೇ ಬಂಧಿಸಬೇಕೆಂದು ಮಾನವಹಕ್ಕುಗಳ ಸಂಸ್ಥೆ ಪೊಲೀಸರಿಗೆ ಆಗ್ರಹಿಸಿದೆ.