ವಿಕಲಾಂಗರಿಗೆ ಹಜ್ ಯಾತ್ರೆಗೆ ಅನುಮತಿ ನಿರಾಕರಣೆ: ಹೈಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ

Update: 2018-04-12 16:26 GMT

ಹೊಸದಿಲ್ಲಿ, ಎ.12: ಹಜ್ ವಾರ್ಷಿಕ ಯಾತ್ರೆಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ನೂತನ ನೀತಿಯಲ್ಲಿ ವಿಕಲಾಂಗರು ಹಜ್ ಯಾತ್ರೆ ಕೈಗೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ. ಹಜ್ ಯಾತ್ರೆಯು ತ್ರಾಸದಾಯಕವಾಗಿರುವ ಕಾರಣ ಕಳೆದ ಮೂವತ್ತು ವರ್ಷಗಳಿಂದಲೂ ವಿಕಲಾಂಗರು ಪವಿತ್ರ ಯಾತ್ರೆ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ವಿಕಲಾಂಗರು ಭಿಕ್ಷೆ ಬೇಡುವ ಹಲವಾರು ಉದಾಹರಣೆಗಳು ಕಂಡುಬಂದಿದ್ದು, ಸೌದಿ ಅರೇಬಿಯದಲ್ಲಿ ಭಿಕ್ಷಾಟಣೆ ನಿಷೇಧವಾಗಿರುವುದರಿಂದ ವಿಕಲಾಂಗರಿಗೆ ಹಜ್ ಯಾತ್ರೆಗೆ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

ಹಜ್ ಯಾತ್ರೆ ತ್ರಾಸದಾಯಕವಾಗಿದ್ದು, ಕಾಲ್ತುಳಿತ ನಡೆದ ಸಂದರ್ಭದಲ್ಲಿ ವಿಕಲಾಂಗರು ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪ್ರಬಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ನ್ಯಾಯಾಧೀಶ ಸಿ. ಹರಿಶಂಕರ್ ನೇತೃತ್ವದ ಪೀಠಕ್ಕೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ. ವಕೀಲ ಗೌರವ್ ಕುಮಾರ್ ಬನ್ಸಲ್ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯ, ಕಳೆದ ಮೂವತ್ತು ವರ್ಷಗಳಿಂದ ವಿಕಲಾಂಗರು ಹಜ್ ಯಾತ್ರೆ ಕೈಗೊಳ್ಳುವುದಕ್ಕೆ ನಿಷೇಧವಿದೆ. ಅದನ್ನೇ 2013-17ರ ನೂತನ ನೀತಿಯಲ್ಲಿ ಮುಂದುವರಿಸಲಾಗಿದೆ ಎಂದು ತಿಳಿಸಿದೆ. ವಿಕಲಾಂಗ ವ್ಯಕ್ತಿಯ ಹಕ್ಕುಗಳ ಕಾಯ್ದೆ 2016ರಂತೆ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದು ತಿಳಿಸಿರುವ ಸಚಿವಾಲಯ, ಈ ಬಗ್ಗೆ ಭಾರತೀಯ ಹಜ್ ಸಮಿತಿಯು ಗಮನಹರಿಸಿ ಯಾವುದೇ ಅಗತ್ಯ ತಿದ್ದುಪಡಿಗಳಿದ್ದಲ್ಲಿ ತಿಳಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News