×
Ad

ಮಂಗಳೂರು: ಇಖ್ರಾ ಅರಬಿಕ್ ಸ್ಕೂಲ್‌ನ ವಾರ್ಷಿಕ ಸಂಭ್ರಮ

Update: 2018-04-12 21:59 IST

ಮಂಗಳೂರು, ಎ.12: ಮೌಲಾನಾ ಅಬುಲ್ ಹಸನ್ ನದ್ವಿ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿರುವ ಇಖ್ರಾ ಅರಬಿಕ್ ಸ್ಕೂಲ್‌ನ ವಾರ್ಷಿಕ ಸಂಭ್ರಮ ಮತ್ತು ಅರಬಿಕ್ ಸ್ಕೂಲ್‌ನಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಹಾಫಿಝ್ ಮತ್ತು ಹಾಫಿಝಾರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಗುರುವಾರ ನಗರದ ಪುರಭವನದಲ್ಲಿ ಜರುಗಿತು.

ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಹಾಗೂ ಮೌಲಾನಾ ಅಬುಲ್ ಹಸನ್ ನದ್ವಿ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಮಂಗಳೂರು ಘಟಕದ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು ಜಗತ್ತಿನಲ್ಲಿ ಹಲವು ಧರ್ಮಗಳಿವೆ, ಆದರೆ ಅವುಗಳ ತಿರುಳು ಒಂದೇ ಆಗಿದೆ. ಧರ್ಮಗಳ ಆಚರಣೆ ಮಾಡುವವರ ಮಧ್ಯೆ ಸಂವಹನದ ಕೊರತೆಯಿಂದ ಅಪನಂಬಿಕೆ ಬೆಳೆದಿದೆ. ಘನತೆ, ಗೌರವದ ಬದುಕಿಗೆ ಮಹತ್ವ ನೀಡಿರುವ ಇಸ್ಲಾಮ್‌ನ ತಿರುಳನ್ನು ಅರಿಯುವ ಪ್ರಯತ್ನವನ್ನು ಇಖ್ರಾ ಅರಬಿಕ್ ಸ್ಕೂಲ್ ಮಾಡುತ್ತಿದೆ. ಆ ಮೂಲಕ ಸಮಾಜಕ್ಕೆ ಸುಶಿಕ್ಷಿತರನ್ನು ಅರ್ಪಿಸಲು ಬದ್ಧವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ ಕುರ್‌ಆನ್ ಅಲ್ಲಾಹನಿಂದ ಅವತೀರ್ಣಗೊಳಿಸಲ್ಪಟ್ಟ ಗ್ರಂಥವಾಗಿದೆ. ಅದು ಮಾನವ ನಿರ್ಮಿತ ಗ್ರಂಥವಲ್ಲ. ಅಲ್ಲದೆ ಅದು ಕೇವಲ ಮುಸ್ಲಿಮರಿಗೆ ಸೀಮಿತವಾದ ಗ್ರಂಥವೂ ಅಲ್ಲ. ಜಗತ್ತಿನ ಎಲ್ಲ ಮಾನವರಿಗೂ ಮಾರ್ಗದರ್ಶನ ನೀಡುವ ಗ್ರಂಥವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಟ್ಕಳದ ಜಾಮಿಯಾ ಇಸ್ಲಾಮಿಯಾದ ಪ್ರಾಂಶುಪಾಲ ಮೌಲಾನಾ ಮಕ್ಬೂಲ್ ಅಹ್ಮದ್ ಕೆ. ನದ್ವಿ, ಮಂಗಳೂರಿನ ವಿಕಾಸ್ ಎಜು ಸೊಲೂಶನ್ಸ್‌ನ ನಿರ್ದೇಶಕ ಡಾ. ಅನಂತ್ ಪ್ರಭು ಜಿ., ಸಂತ ಅಲೋಶಿಯಸ್ ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಪ್ರೊ. ಡಾ. ಆಲ್ವಿನ್ ವಿ. ಡೇಸಾ ಭಾಗವಹಿಸಿ ಮಾತನಾಡಿದರು.

ಇಖ್ರಾ ಅರಬಿಕ್ ಸ್ಕೂಲ್‌ನ ಪ್ರಾಂಶುಪಾಲ ಮೌಲಾನಾ ಸಾಲಿಂ ಖಲೀಫಾ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಯಹ್ಯಾ ತಂಙಳ್ ಉಪಸ್ಥಿತರಿದ್ದರು.

ವಾರ್ಷಿಕ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಧಾರ್ಮಿಕ ಸಮ್ಮಿಲಿತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. 2017-18ನೆ ಸಾಲಿನಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಹಾಫಿಝ್ ಮತ್ತು ಹಾಫಿಝಾರಿಗೆ ಗೌರವ ಸನ್ಮಾನ ಮಾಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News