1.3 ಶತಕೋಟಿ ಆಧಾರ್ ದತ್ತಾಂಶ ದುರ್ಬಳಕೆಯಾಗುವ ಸಾಧ್ಯತೆ : ಸುಪ್ರೀಂ ಕೋರ್ಟ್

Update: 2018-04-12 16:48 GMT

ಹೊಸದಿಲ್ಲಿ, ಎ. 12: ಕುಖ್ಯಾತ ಬ್ರಿಟಿಶ್ ಕಂಪೆನಿ ಕೇಂಬ್ರಿಜ್ ಅನಾಲಿಟಿಕಾ ಫೇಸ್‌ಬುಕ್ ದತ್ತಾಂಶವನ್ನು ಅಕ್ರಮವಾಗಿ ಬಳಸಿರುವುದನ್ನು ಗುರುವಾರ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, 1.3 ಶತಕೋಟಿ ಭಾರತೀಯ ಆಧಾರ್ ದತ್ತಾಂಶ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಆಧಾರ್ ಕಾರ್ಡ್‌ನ ಸಿಂಧುತ್ವ ಹಾಗೂ ದತ್ತಾಂಶ ಸುರಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ 27 ದೂರುಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. 1.3 ಶತಕೋಟಿ ಜನರ ಮಾಹಿತಿಯನ್ನು ನಾವು ನಿರ್ವಹಿಸುತ್ತಿದ್ದೇವೆ. ವಾಣಿಜ್ಯ ಉದ್ದೇಶಗಳಿಗೆ ಇದು ಚಿನ್ನದ ಗಣಿ ಎಂದು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಧಾರ್‌ನ ನಿರ್ಣಾಯಕ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ 5 ಸದಸ್ಯರ ಪೀಠದ ಸದಸ್ಯರಾಗಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹೇಳಿದ್ದಾರೆ.

ಫೇಸ್‌ಬುಕ್ ದತ್ತಾಂಶ ದುರ್ಬಳಕೆ ಆಗಿರುವುದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಚುನಾವಣೆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ಈ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡಿತ್ತು. ಇದನ್ನು ಗಮನಿಸಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅಮೆರಿಕದ ಕಾಂಗ್ರೆಸ್ ಮುಂದೆ ಹೇಳಿಕೆ ನೀಡಿದ್ದರು ಎಂದು ಅವರು ಹೇಳಿದರು. ಭಾರತೀಯ ದತ್ತಾಂಶ ಸುರಕ್ಷಿತವಾಗಿದೆ ಎಂದು ಹೇಳಿರುವ ಭಾರತೀಯ ಅನನ್ಯ ಗುರುತು ಪ್ರಾಧಿಕಾರ, ಇಲ್ಲಿ ದತ್ತಾಂಶವನ್ನು ರಕ್ಷಿಸುವ ಕಾನೂನು ಕಠಿಣವಾಗಿದೆ. ಅದು ಯುರೋಪಿಯನ್ ಕಾನೂನಿಗಿಂತಲೂ ಕಠಿಣವಾಗಿದೆ ಎಂದು ಹೇಳಿದರು. ಭಾರತೀಯ ಅನನ್ಯ ಗುರುತು ಪ್ರಾಧಿಕಾರದ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಬುಧವಾರ ನಡೆಯಲಿರುವ ಮುಂದಿನ ವಿಚಾರಣೆ ಸಂದರ್ಭ ಸುರಕ್ಷಾ ವಿವರಗಳನ್ನು ಹಂಚಿಕೊಳ್ಳಬೇಕು ಎಂದು ಆಧಾರ್ ಪ್ರಾಧಿಕಾರಕ್ಕೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News