ರಾಜ್ಯದ ಬಿಜೆಪಿ ಮುಖಂಡನ ಪುತ್ರಿ, ಕಾಂಗ್ರೆಸ್ ಕಾರ್ಯಕರ್ತನ ಪ್ರೇಮ ಪ್ರಕರಣ ಸುಪ್ರೀಂ ಅಂಗಳಕ್ಕೆ
ಹೊಸದಿಲ್ಲಿ, ಎ.12: ಯುದ್ಧ ಮತ್ತು ಪ್ರೀತಿಗೆ ಯಾವುದೇ ಕಾನೂನು ಅಡ್ಡಿಯಾಗದು ಎಂಬ ಮಾತೊಂದಿದೆ. ರಾಜಕೀಯದಲ್ಲಿ ಬದ್ಧ ವಿರೋಧಿಗಳಾದ ಬಿಜೆಪಿ ನಾಯಕನ ಪುತ್ರಿಯ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಪ್ರೇಮಪ್ರಕರಣ ಈಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಕರ್ನಾಟಕದ ಬಿಜೆಪಿ ಮುಖಂಡರೊಬ್ಬರ ಪುತ್ರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಪರಸ್ಪರ ಪ್ರೀತಿಸುತ್ತಿದ್ದು ತಮ್ಮನ್ನು ಒಗ್ಗೂಡಿಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದಾರೆ.
ಬಿಜೆಪಿಯ ಮುಖಂಡ, ಮಾಜಿ ಸಚಿವರ ಪುತ್ರಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಈಕೆಯ ವಿವಾಹವನ್ನು ಮನೆಯವರು ಮತ್ತೊಬ್ಬ ವ್ಯಕ್ತಿಯೊಡನೆ ಇತ್ತೀಚೆಗೆ ಗುಲಬರ್ಗಾದಲ್ಲಿ ನೆರವೇರಿಸಿದ್ದರು. ಆದರೆ ಆಕೆ ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಜಾತಿ ಬೇರೆ ಆಗಿರುವ ಕಾರಣ ಇದಕ್ಕೆ ಹುಡುಗಿಯ ಮನೆಯವರು ಒಪ್ಪಿರಲಿಲ್ಲ. ಮದುವೆಯಾದ ಬಳಿಕ ಹುಡುಗಿ ಮನೆಯಿಂದ ಓಡಿಹೋಗಿದ್ದು ದಿಲ್ಲಿಗೆ ತಲುಪಿ ಸುಪ್ರೀಂಕೋರ್ಟ್‌ನ ಬಾಗಿಲು ಬಡಿದು , ತನ್ನ ಮದುವೆಯನ್ನು ರದ್ದುಪಡಿಸಿ, ತಾನು ಪ್ರೀತಿಸುತ್ತಿರುವ ವ್ಯಕ್ತಿಯೊಡನೆ ತನ್ನನ್ನು ಒಂದುಗೂಡಿಸುವಂತೆ ಕೋರಿಕೆ ಸಲ್ಲಿಸಿದ್ದಾಳೆ.
ಆದರೆ ಇದನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಕರ್ನಾಟಕಕ್ಕೆ ತೆರಳಿ ಪೊಲೀಸರ ರಕ್ಷಣೆ ಪಡೆಯುವಂತೆ ತಿಳಿಸಿದೆ. ಕರ್ನಾಟಕದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎದುರು ಹಾಜರಾಗಿ ತಮಗಿರುವ ಜೀವಬೆದರಿಕೆಯನ್ನು ತಿಳಿಸಿ ರಕ್ಷಣೆ ಕೋರುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ ತಿಂಗಳಿಗೆ ಮುಂದೂಡಿದೆ.