ಚಿಲಿಯ ಲೈಂಗಿಕ ದೌರ್ಜನ್ಯ ಹಗರಣದ ತೀರ್ಮಾನದಲ್ಲಿ ನನ್ನಿಂದ ತಪ್ಪಾಗಿದೆ: ಪೋಪ್

Update: 2018-04-12 18:27 GMT

ವ್ಯಾಟಿಕನ್ ಸಿಟಿ, ಎ. 12: ಚಿಲಿಯ ಲೈಂಗಿಕ ದೌರ್ಜನ್ಯ ಹಗರಣದ ತೀರ್ಮಾನದಲ್ಲಿ ತಾನು ಗಂಭೀರ ತಪ್ಪುಗಳನ್ನು ಮಾಡಿದ್ದೇನೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ ಹಾಗೂ ಸಂತ್ರಸ್ತರ ಕ್ಷಮೆ ಕೋರುವುದಕ್ಕಾಗಿ ಅವರನ್ನು ರೋಮ್‌ಗೆ ಆಹ್ವಾನಿಸಿದ್ದಾರೆ.

ಹಗರಣದಿಂದ ಆಗಿರುವ ಹಾನಿಯನ್ನು ಸರಿಪಡಿಸುವ ಬಗ್ಗೆ ಚರ್ಚಿಸುವುಕ್ಕಾಗಿ ಮುಂದಿನ ವಾರಗಳಲ್ಲಿ ನಡೆಯಲಿರುವ ತುರ್ತು ಸಭೆಗೆ ಹಾಜರಾಗುವಂತೆ ಚಿಲಿಯ ಎಲ್ಲ ಬಿಶಪ್‌ಗಳಿಗೆ ಪೋಪ್ ಸೂಚನೆ ನೀಡಿದ್ದಾರೆ.

ಅಸಾಮಾನ್ಯ ಬಹಿರಂಗ ಪತ್ರವೊಂದರಲ್ಲಿ ಪೋಪ್ ತನ್ನ ಮನದಿಂಗಿತವನ್ನು ಹೇಳಿದ್ದಾರೆ.

ಇಂಥ ತುರ್ತು ಸಭೆಗಳನ್ನು ವ್ಯಾಟಿಕನ್ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ನಡೆಸುತ್ತದೆ. 2002ರಲ್ಲಿ ಅಮೆರಿಕದಲ್ಲಿ ಧಾರ್ಮಿಕ ನಾಯಕರ ಲೈಂಗಿಕ ದೌರ್ಜನ್ಯ ಬಹಿರಂಗಗೊಂಡ ಬಳಿಕ ಹಾಗೂ 2010ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸಿದ ರೀತಿಗಾಗಿ ಐರಿಶ್ ಬಿಶಪ್‌ಗಳನ್ನು ತರಾಟೆಗೆ ತೆಗೆದುಕೊಳ್ಳುವುದಕಾಗಿ ತುರ್ತು ಸಭೆಗಳನ್ನು ಏರ್ಪಡಿಸಲಾಗಿತ್ತು.

ಜನವರಿಯಲ್ಲಿ ಚಿಲಿಗೆ ಭೇಟಿ ನೀಡಿದ್ದ ಪೋಪ್ ಫ್ರಾನ್ಸಿಸ್, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪಾದ್ರಿಯನ್ನು ದೋಷಮುಕ್ತಗೊಳಿಸಿದ ಬಿಶಪ್ ಜುವಾನ್ ಬ್ಯಾರೋಸ್‌ರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಆದರೆ, ತಮ್ಮ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬ್ಯಾರೋಸ್‌ಗೆ ತಿಳಿದಿತ್ತು ಎಂಬುದಾಗಿ ಸಂತ್ರಸ್ತರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News