ಉ.ಪ್ರದೇಶ ಸರಕಾರದ ನಡೆಯನ್ನು ಸಮರ್ಥಿಸಿದ ಕೇಂದ್ರ ಸಚಿವ!

Update: 2018-04-12 17:05 GMT

ಹೊಸದಿಲ್ಲಿ, ಎ.12: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಕೈಗೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡಿದ್ದಾರೆ.

 ‘ಬೇಟಿ ಬಚಾವೊ’ ಎಂದು ಘೋಷಣೆ ಮಾಡುವ ಕೇಂದ್ರ ಸರಕಾರ , ಉನ್ನಾವೊ ಸಂತ್ರಸ್ತೆ ಕೂಡಾ ಒಬ್ಬ ತಾಯಿಯ ಮಗಳು ಎಂಬುದನ್ನು ಮರೆತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರದ ಸಂಸ್ಕ್ರತಿ ಇಲಾಖೆಯ ಸಚಿವ ಮಹೇಶ್ ಶರ್ಮ, “ನಾವು ಬೇಟಿ ಬಚಾವೊ ಎಂದು ಹೇಳಿದ ಮೇಲೆ ಹೆಣ್ಣುಮಕ್ಕಳ ರಕ್ಷಣೆಗೆ ನಾವು ಬದ್ಧರಾಗಿಯೇ ಇದ್ದೇವೆ. ಉನ್ನಾವೊ ಪ್ರಕರಣದಲ್ಲಿ ಖಂಡಿತಾ ಕಾನೂನಿನ ಪ್ರಕಾರ ನ್ಯಾಯ ದೊರೆಯಲಿದೆ . ತಪ್ಪಿತಸ್ತ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಆತನನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಇದೊಂದು ಅತ್ಯಂತ ನೋವಿನ ವಿಷಯವಾಗಿದ್ದು ನ್ಯಾಯ ದೊರಕಲಿದೆ. ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಲಾಗಿದ್ದು, ಕಾನೂನು ತನ್ನ ದಾರಿಯಲ್ಲೇ ಸಾಗಲಿದೆ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾತ್ರಿ ಹಗಲು ದುಡಿಯುತ್ತಿದೆ. ಸರಕಾರ ಶೀಘ್ರ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಉ.ಪ್ರದೇಶ ಸರಕಾರ ಈ ಪ್ರಕರಣವನ್ನು ನಿಭಾಯಿಸಿರುವ ರೀತಿಯನ್ನು ವಿಪಕ್ಷಗಳು ಟೀಕಿಸಿವೆ. ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮತ್ತು ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವನ್ನು ವಿರೋಧಿಸಿ ಪ್ರಧಾನಿ ಮೋದಿ ಉಪವಾಸ ಸತ್ಯಾಗ್ರಹ ನಡೆಸುವರೇ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News