×
Ad

ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕಾರಲ್ಲೇ ಹೆರಿಗೆ: ಮಾನವೀಯ ಸ್ಪಂದನೆಗೆ ಸಾರ್ವತ್ರಿಕ ಪ್ರಶಂಸೆ

Update: 2018-04-12 22:48 IST

ಮಂಗಳೂರು, ಎ.12: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರು ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರ ಕಾರಿನಲ್ಲೇ ಮಗುವಿಗೆ ಜನ್ಮವಿತ್ತ ಪ್ರಸಂಗ ಗುರುವಾರ ನಗರದಲ್ಲಿ ನಡೆದಿದೆ.

ತೊಕ್ಕೊಟ್ಟು ಸಮೀಪದ ಕೋಟೆಕಾರು ಬೀರಿ ನಿವಾಸಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವಿ ಮಾನವೀಯತೆ ಮೆರೆತವರು. ಅವರು ಗುರುವಾರ ಬೆಳಗ್ಗೆ ಸುಮಾರು 7:30ರ ವೇಳೆಗೆ ಕಾರಿನಲ್ಲಿ ತನ್ನ ಮಕ್ಕಳನ್ನು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಬರುತ್ತಿದ್ದರು. ರವಿಯವರು ಕಾರನ್ನು ಎಕ್ಕೂರು ಕೇಂದ್ರೀಯ ವಿದ್ಯಾಲಯದ ಎದುರು ನಿಲ್ಲಿಸುತ್ತಿದ್ದಂತೆ ರಿಕ್ಷಾವೊಂದರಲ್ಲಿದ್ದ ನೌಷಾದ್ ಎಂಬವರು ಓಡಿ ಬಂದು ‘ರಿಕ್ಷಾದಲ್ಲಿ ಗರ್ಭೀಣಿಯೊಬ್ಬರು ನೋವಿನಿಂದ ಒದ್ದಾಡುತ್ತಿದ್ದಾರೆ. ದಯವಿಟ್ಟು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದು ವಿನಂತಿಸಿದರು. ಅಪಾಯವನ್ನು ಅರಿತ ರವಿಯವರು ತಕ್ಷಣ ಸ್ಪಂದಿಸಿ ಮಹಿಳೆಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪಂಪುವೆಲ್ ಜಂಕ್ಷನ್ ತಲುಪುತ್ತಿದ್ದಂತೆ ಉಳ್ಳಾಲದ ಗರ್ಭಿಣಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ರವಿಯವರು ತಾಯಿ ಮತ್ತು ಮಗುವನ್ನು ನೇರ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಮಾನವೀಯತೆ ಮೆರೆದ ಹೆಡ್ ಕಾನ್‌ಸ್ಟೇಬಲ್: ರವಿಯವರ ಈ ಮಾನವೀಯತೆಯನ್ನು ನೌಷದ್ ಮತ್ತು ಮಹಿಳೆಯ ಕುಟುಂಬದವರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಈ ಬಗ್ಗೆ ಗರ್ಭಿಣಿಯ ಸಹೋದರ ನೌಷಾದ್ ಮಾತನಾಡಿ, ನನ್ನ ತಂಗಿಯ ಕಷ್ಟಕ್ಕೆ ಸ್ಪಂದಿಸಿದ ರವಿಯವರ ಮಾನವೀಯತೆ ಎಲ್ಲರಿಗೂ ಮಾದರಿಯಾಗಿದೆ. ಕಾರಿನ ಸೀಟಿನಲ್ಲಿ ಸಂಪೂರ್ಣ ರಕ್ತವಾಗಿದ್ದು, ಅದನ್ನು ನಾವು ಸರ್ವಿಸ್ ಮಾಡಿ ಕೊಡುತ್ತೇವೆ ಹೇಳಿದರೂ ಕೂಡ ಅವರು ಬೇಡ ನಾನೇ ಮಾಡಿಸುತ್ತೇನೆ ಎಂದು ನಗುತ್ತಲೇ ಹೇಳಿ ಮುಂದೆ ಸಾಗಿದ್ದಾರೆ. ಕಷ್ಟಕಾಲದಲ್ಲಿ ನಮಗೆ ಅವರು ಆಪತ್ಭಾಂದವರಾದರು ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News