ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ: 15 ಮಂದಿಯ ವಿರುದ್ಧ ಪ್ರಕರಣ ದಾಖಲು
Update: 2018-04-12 22:52 IST
ಮಂಗಳೂರು, ಎ.12: ನಗರದ ಪಾಂಡೇಶ್ವರದ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ಮಧ್ಯೆ ಗುರುವಾರ ಅಪರಾಹ್ನ ಹೊಡೆದಾಟ ಸಂಭವಿಸಿದ್ದು, 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಅಪರಾಹ್ನ ಸುಮಾರು 2:30ರ ವೇಳೆಗೆ ವಿದ್ಯಾರ್ಥಿಗಳ ಎರಡು ತಂಡಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಟದಲ್ಲಿ ತೊಡಗಿತ್ತು ಎನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಜಗಳ ಬಿಡಿಸಲು ಯತ್ನಿಸಿದರು. ಆದರೆ ವಿದ್ಯಾರ್ಥಿಗಳು ಪೊಲೀಸರು ಮಾತನ್ನು ಕೇಳದೆ ಜಗಳ ಮುಂದುವರಿಸಿದರು ಎನ್ನಲಾಗಿದೆ. ಹಾಗಾಗಿ ಕೆಲವು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿ ಕೇಸು ದಾಖಲಿಸಲಾಯಿತು ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಇನ್ನೂ ಕೆಲವರು ಓಡಿ ತಪ್ಪಿಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಘಟನೆಯ ಬಗ್ಗೆ ವಿವರಿಸಿದ್ದಾರೆ.