ಉಡುಪಿ: ಜೆಡಿಎಸ್-ಬಿಎಸ್ಪಿ ಎಲ್ಲಾ 5 ಸ್ಥಾನಗಳಿಗೆ ಸ್ಪರ್ಧೆ
ಉಡುಪಿ, ಎ.12: ಈ ಬಾರಿಯ ವಿಧಾನಸಭಾ ಚುನಾವಣೆಗಾಗಿ ರಾಜ್ಯಮಟ್ಟದಲ್ಲಿ ಜೆಡಿಎಸ್ ಹಾಗೂ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷಗಳು ಮಾಡಿಕೊಂಡ ಹೊಂದಾಣಿಕೆಯಂತೆ ಉಡುಪಿ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿಗಳು ನಾಲ್ಕು ಹಾಗೂ ಬಿಎಸ್ಪಿ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಇಳಿಸಲಿವೆ ಎಂದು ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗೀಶ್ ಶೆಟ್ಟಿ, ಜೆಡಿಎಸ್ ಅಭ್ಯರ್ಥಿಗಳು ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾಪು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಬಿಎಸ್ಪಿ ಅಭ್ಯರ್ಥಿ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಸವಿತಾ ಸಮಾಜದ ಮುಖಂಡ ಹಾಗೂ ಬಾರಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿರ್ತಿ ಗಂಗಾಧರ ಭಂಡಾರಿ ಹಾಗೂ ಬೈಂದೂರು ಕ್ಷೇತ್ರದಿಂದ ಕಾರ್ಮಿಕ ನಾಯಕ, ಬಂಟ ಸಮಾಜದ ರವಿ ಶೆಟ್ಟಿ ಅವರನ್ನು ಜೆಡಿಎಸ್‌ನ ಅಭ್ಯರ್ಥಿಗಳಾಗಿ ಈಗಾಗಲೇ ಘೋಷಿಸಲಾಗಿದೆ ಎಂದರು.
ಇನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಇವರನ್ನು ಜಿಲ್ಲಾ ಸಮಿತಿ ಅಂತಿಮಗೊಳಿಸಿದ್ದು, ರಾಜ್ಯ ನಾಯಕರ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಯೋಗೇಶ್ ಶೆಟ್ಟಿ ತಿಳಿಸಿದರು. ಇನ್ನು ಕಾಪು ಕ್ಷೇತ್ರದಿಂದ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಯನ್ನು ಒಂದೆರಡು ದಿನದಲ್ಲಿ ಅಂತಿಮಗೊಳಿಸಿ ರಾಜ್ಯ ನಾಯಕರ ಒಪ್ಪಿಗೆ ಕಳುಹಿಸಲಾ ಗುವುದು ಎಂದರು.
ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಕಾರ್ಕಳ ಕ್ಷೇತ್ರವನ್ನು ಮಿತ್ರ ಪಕ್ಷವಾದ ಬಿಎಸ್ಪಿಗೆ ಬಿಟ್ಟು ಕೊಡಲಾಗಿದ್ದು, ಅಲ್ಲಿ ಬಿಎಸ್ಪಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರು ಕಾರ್ಕಳದಲ್ಲಿ ಬಿಎಸ್ಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ.ಅದೇ ರೀತಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಎಸ್ಪಿ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ ್ರಚಾರ ಕೈಗೊಳ್ಳಲಿದ್ದಾರೆ ಎಂದರು.
ಕಾರ್ಕಳ ಕ್ಷೇತ್ರಕ್ಕೆ ಬಿಎಸ್ಪಿ ಪಕ್ಷದ ಅಭ್ಯರ್ಥಿಯ ಆಯ್ಕೆ ಒಂದೆರಡು ದಿನಗಳಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಎಸ್ಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ತಲ್ಲೂರು ತಿಳಿಸಿದರು. ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಉತ್ತರವನ್ನು ರಾಜ್ಯದ ಜನತೆ ನೀಡಲಿದ್ದಾರೆ ಎಂದು ಯೋಗೇಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭ್ಯಥಿಗಳಾದ ಬಿರ್ತಿ ಗಂಗಾಧರ ಭಂಡಾರಿ, ರವಿ ಶೆಟ್ಟಿ, ಪ್ರಶಾಂತ್ ತೊಟ್ಟಂ ಮುಂತಾದವರು ಉಪಸ್ಥಿತರಿದ್ದರು.