ಪುರಾತನ ಉದ್ಯಾವರ ಶಂಭುಕಲ್ಲು ದೇವಳದ ಜೀಣೋದ್ದಾರ
ಉದ್ಯಾವರ, ಎ.12: ಒಂದೇ ಗರ್ಭಗುಡಿಯೊಳಗೆ ಮೃಣ್ಮಯಿ, ಕಾಷ್ಟ ಹಾಗೂ ಶಿಲೆಯ ಮೂರ್ತಿಗಳಿರುವ ಅಪರೂಪದ, ಇತಿಹಾಸಕಾರರ ಪ್ರಕಾರ ಸಾವಿರಾರು ವರ್ಷಗಳ ಪುರಾತನ ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ ದುರ್ಗಾ ಪರಮೇಶ್ವರಿ ಗಣಪತಿ ಮಹಾಕಾಳಿ ಪಂಜುರ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸುಮಾರು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಮುಕ್ತಾಯ ಹಂತದಲ್ಲಿದ್ದು, ಇದರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಕಲಿ ಕಲ್ಲಡ (ವಾರ್ಷಿಕ ರಥೋತ್ಸವ) ಎ.16ರಿಂದ 24ರವರೆಗೆ ನಡೆಯಲಿದೆ.
ದೇವಸ್ಥಾನದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪಠೇಲರ ಮನೆ ಉಲ್ಲಾಸ್ ಶೆಟ್ಟಿ ಈ ವಿಷಯ ತಿಳಿಸಿದರು.
ದೇಗುಲದ ಗರ್ಭಗುಡಿಯ ಒಂದೇ ಆವರಣದ ಒಳಗೆ ಗೋಡೆಗೆ ತಾಗಿಕೊಂಡೇ ರಚಿತವಾದ ಮಣ್ಣಿನ ಸಾವಿತ್ರಿ-ಗಾಯತ್ರಿ-ಸರಸ್ವತಿ ಮೂರ್ತಿಗಳನ್ನು ಇಲ್ಲಿ ಆರಾಧಿಸಲಾಗುತ್ತಿದೆ. ಅಗತ್ಯಬಿದ್ದರೆ ಈ ಮಣ್ಣಿನ ಮೂರ್ತಿಗಳ ಪುನರ್‌ರಚನೆಗೆ ಬೇಕಾದ ಮೃತಿಕೆಯನ್ನು ದೇವಾಲಯದ ಕೊಠಡಿಯೊಂದರಲ್ಲಿ ಅನಾದಿಕಾಲದಿಂದಲೂ ರಕ್ಷಿಸಿಕೊಂಡು ಬರಲಾಗುತ್ತಿದೆ. ಈ ಮೂರ್ತಿಗಳ ಎಡಬದಿಯಲ್ಲಿ ದಕ್ಷಿಣಾಭಿಮುಖವಾಗಿ ರಕ್ತಚಂದನ ಮರದ ಏಕಕಾಷ್ಠಶಿಲ್ವದಿಂದ ರಚಿಸಲಾದ 12 ಕೈಗಳಲ್ಲಿ 12 ವಿಧದ ಆಯುಧಗಳನ್ನು ಧರಿಸಿದ ಆರು ಅಡಿ ಎತ್ತರದ ವೀರಭದ್ರ ಮೂರ್ತಿ ಇದ್ದು, ಇದರ ಎದುರಿಗೆ ಗಣಪತಿಯ ಶಿಲಾಮೂರ್ತಿಯೂ ಇದೆ ಹೀಗೆ ಒಂದೇ ಗರ್ಭಗುಡಿಯಲ್ಲಿ ಪಂಚಶಕ್ತಿ ರೂಪದ ಆರಾಧನೆ ಇಲ್ಲಿ ನಡೆಯುವುು ವಿಶಿಷ್ಟ ಎಂದು ಅವರು ಹೇಳಿದರು.
ಹೊರ ಆವರಣದಲ್ಲೂ ಮಹಾಕಾಳಿಯ ಆಳೆತ್ತರ ಮೃಣ್ಮಯಿ ಮೂರ್ತಿ ಇದೆ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆಯನ್ನು ‘ಕಲಿ ಕಲ್ಲಡ’ ಎಂದು ಕರೆಯಲಾಗುತ್ತದೆ. ಜೀರ್ಣಾವಸ್ಥೆಯಲ್ಲಿದ್ದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಇದೀಗ ನಡೆದಿದ್ದು, 16ರಿಂದ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಉಲ್ಲಾಸ್ ಶೆಟ್ಟಿ ತಿಳಿಸಿದ್ದಾರೆ.
ದೇವಸ್ಥಾನದ ತಂತ್ರಿಗಳಾದ ಕೆ.ಎ.ಸರ್ವೋತ್ತಮ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಎ.15ರಂದು ಹೊರಕಾಣಿಕೆ ಸಮರ್ಪಣೆ ನಡೆಯಲಿದೆ.19ರಂದು ಶ್ರೀವೀರಭದ್ರ ದುರ್ಗಾಪರಮೇಶ್ವರಿ, ಗಣಪತಿ ದೇವರಿಗೆ ಅಷ್ಟಬಂಧ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ. 20ರಂದು ಬ್ರಹ್ಮಕುಂಭಾಭಿಷೇಕ ಸಮರ್ಪಣೆಗೊಳ್ಳುವುದು ನಂತರ ಮಹಾ ಅನ್ನಸಂತರ್ಪಣೆಯಲ್ಲಿ 10,000ಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. 21ರಂದು ವಾರ್ಷಿಕ ಜಾತ್ರ ಮಹೋತ್ಸವ, ರಥಾರೋಹಣ ಹಾಗೂ ರಾತ್ರಿ ರಥೋತ್ಸವ (ಕಲ್ಲಡ ಜಾತ್ರೆ) ಹಾಗೂ ಮಹಾಕಾಳಿ ಕೋಲ ನಡೆಯಲಿದೆ ಎಂದು ಉಲ್ಲಾಸ್ ಶೆಟ್ಟಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ಈಶ್ವರ ಚಿಟ್ಪಾಡಿ, ಉಪಾಧ್ಯಕ್ಷರಾದ ಪ್ರತಾಪ್ ಕುಮಾರ್, ಗೋಪಾಲ ದೇವಾಡಿಗ,ಜೊತೆ ಕಾರ್ಯದರ್ಶಿ ಯು.ಆರ್.ಚಂದ್ರಶೇಖರ್, ಕಾರ್ಯದರ್ಶಿ ಸುರೇಶ್ ಪೂಜಾರಿ, ಪ್ರಧಾನ ಅರ್ಚಕರಾದ ಶ್ರೀನಿವಾಸ ಮೂರ್ತಿ, ರಾಮಮೂರ್ತಿ ಭಟ್, ಜಿತೇಂದ್ರ ಶೆಟ್ಟಿ, ವಿನೋದ್ ಕುಮಾರ್ ಪಿತ್ರೋಡಿ ಉಪಸ್ಥಿತರಿದ್ದರು.