×
Ad

ತಲಪಾಡಿ: ಬಾರ್‌ನಲ್ಲಿ ತಂಡದಿಂದ ದಾಂಧಲೆ , ಇಬ್ಬರಿಗೆ ಗಾಯ

Update: 2018-04-12 23:05 IST

ಉಳ್ಳಾಲ, ಎ. 12: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರ ರಸ್ತೆಯಲ್ಲಿರುವ ಬಾರೊಂದಕ್ಕೆ ತಂಡವೊಂದು ಅಕ್ರಮವಾಗಿ ಕ್ಯಾಷ್ ಕೌಂಟರಿಗೆ ನುಗ್ಗಿ ದಾಂಧಲೆಗೈದು, ಇಬ್ಬರ ಮೇಲೆ ಹಲ್ಲೆ ನಡೆಸಿ ನಗದು , ಮದ್ಯದ ಬಾಟಲಿ ಲೂಟಿಗೈದು ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಬುಧವಾರ ನಡೆದಿದೆ.

ತಲಪಾಡಿ ದೇವಿಪುರ ರಸ್ತೆಯಲ್ಲಿರುವ ಬಾರ್ ನಲ್ಲಿ ದಾಂಧಲೆ ನಡೆದಿದ್ದು, ಸ್ಥಳೀಯ ನಿವಾಸಿಗಳಾದ ನಿಚ್ಚು , ಸಂದೇಶ, ಗಣೇಶ, ರಾಹುಲ್, ರಮಾನಂದ, ಕಿರಣ್, ಶಿವ, ಹಾಗೂ ಇತರೆ 12 ಮಂದಿಯ ತಂಡ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದೆ ಎನ್ನಲಾಗಿದೆ. ಮಧ್ಯಾಹ್ನ ವೇಳೆ ಬಾರಿನ ಕ್ಯಾಷ್ ಕೌಂಟರಿನೊಳಕ್ಕೆ ನುಗ್ಗಿದ ತಂಡ ಕಂಪ್ಯೂಟರ್, ಪ್ರಿಂಟರ್ ಪುಡಿಗೈದು, ಕ್ಯಾಷಿನಲ್ಲಿರಿಸಲಾಗಿದ್ದ ರೂ. 1 ಲಕ್ಷ ನಗದು , ಮೊಬೈಲ್ ಕಳವುಗೈದು , ಮದ್ಯದ ಬಾಟಲಿಯಿಂದ ಬಾರ್ ಸಿಬ್ಬಂದಿ ತಲೆಗೆ, ಕೈಗೆ ಹೊಡೆದಿದ್ದಾರೆ. ಜತೆಗೆ ಬಾಟಲಿಗಳನ್ನು ಕಳವು ನಡೆಸಿದ್ದಾರೆ ಎಂದು ದೂರಲಾಗಿದೆ.

ಘಟನೆಯಲ್ಲಿ ಸಿಬ್ಬಂದಿ ಪ್ರವೀಣ್ ಮತ್ತು ಸುಜಿತ್ ಎಂಬವರು ಗಾಯಗೊಂಡಿದ್ದಾರೆ. ಎ.10 ರ ತಡರಾತ್ರಿ ಬಂದಿದ್ದ ಇಬ್ಬರ ತಂಡ ಮದ್ಯ ಕೊಡುವಂತೆ ಕೇಳಿತ್ತು. ಆದರೆ ಸಮಯ 11 ಕಳೆದಿದ್ದು, ಕೊಡುವುದಿಲ್ಲ ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಆಕ್ರೋಶಗೊಂಡ ತಂಡ ಬಾರ್ ನ ಕಿಟಕಿ ಗಾಜನ್ನು ಪುಡಿಗೈದಿತ್ತು. ಬಳಿಕ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಾಗ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಓರ್ವ ಪರಾರಿಯಾಗಿದ್ದರೆ, ಸೋಮ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ನಿಚ್ಚು ಎಂಬಾತನಿಗೆ ಸೇರಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರ ಪ್ರತೀಕಾರ ತೀರಿಸುವ ಸಲುವಾಗಿ 19 ಮಂದಿಯ ತಂಡ ಬುಧವಾರ ಏಕಾಏಕಿ ಬಾರಿನೊಳಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂಡ ದಾಳಿ ನಡೆಸಿರುವ ದೃಶ್ಯ ಕ್ಯಾಶರ್ ಕಂಟರ್‌ನೊಳಕ್ಕೆ ಇರಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕೆಲವರು ಹೆಲ್ಮೆಟ್ ಮತ್ತು ಮುಖಕ್ಕೆ ಬಟ್ಟೆ ಕಟ್ಟಿದ್ದರೆ ಇನ್ನು ಹಲವರು ಹಾಗೆಯೇ ದಾಂಧಲೆ ನಡೆಸಿರುವುದು ಕಂಡುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News