ಡೌಮದಲ್ಲಿ ಹಾರಿದ ಸಿರಿಯ ಸರಕಾರದ ಧ್ವಜ

Update: 2018-04-12 17:40 GMT

ಡಮಾಸ್ಕಸ್, ಎ. 12: ಸಿರಿಯದ ಡೌಮ ಪಟ್ಟಣದಲ್ಲಿ ಅಲ್ಲಿನ ಸರಕಾರದ ಧ್ವಜ ಹಾರಾಡುತ್ತಿದೆ ಎಂದು ರಶ್ಯ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.

ಇದು ಪೂರ್ವ ಘೌತದ ಮೇಲೆ ರಶ್ಯದ ಸರಕಾರಿ ಪಡೆಗಳು ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.

ಅದೇ ವೇಳೆ, ಘೌತದಲ್ಲಿ ಬಂಡುಕೋರರು ತಮ್ಮ ಭಾರೀ ಶಸ್ತ್ರಾಸ್ತ್ರಗಳನ್ನು ಸರಕಾರಿ ಪಡೆಗಳಿಗೆ ಒಪ್ಪಿಸಿದ್ದಾರೆ ಹಾಗೂ ಅವರ ನಾಯಕ ಹೊರಗೆ ಹೋಗಿದ್ದಾನೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

‘‘ಇಂದು ಸಿರಿಯದ ಇತಿಹಾಸದಲ್ಲೇ ಮಹತ್ವದ ಘಟನೆಯೊಂದು ನಡೆದಿದೆ. ಡೌಮ ಪಟ್ಟಣದ ಕಟ್ಟಡವೊಂದರ ಮೇಲೆ ಸಿರಿಯ ಸರಕಾರದ ಧ್ವಜ ಹಾರಾಡಿದೆ. ಇದು ಡೌಮ ಪಟ್ಟಣದ ಮೇಲೆ ಹಾಗೂ ಅಂತಿಮವಾಗಿ ಇಡೀ ಪೂರ್ವ ಘೌತದ ಮೇಲೆ ಸಿರಿಯ ಸರಕಾರ ನಿಯಂತ್ರಣ ಹೊಂದಿರುವುದನ್ನು ಸೂಚಿಸಿದೆ’’ ಎಂದು ಸಿರಿಯದಲ್ಲಿ ರಶ್ಯ ಸೇನೆಯ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಮೇಜರ್ ಜನರಲ್ ಯೂರಿ ಯೆವ್ಟಶೆಂಕೊರನ್ನು ಉಲ್ಲೇಖಿಸಿ ‘ಇಂಟರ್‌ಫ್ಯಾಕ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡೌಮದಲ್ಲಿ ಗುರುವಾರ ರಶ್ಯ ಸೇನಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ರಶ್ಯ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಆರ್‌ಐಎ ಸುದ್ದಿ ಸಂಸ್ಥೆ ತಿಳಿಸಿದೆ.

ಸಿರಿಯ ಪರಿಸ್ಥಿತಿ ಬಗ್ಗೆ ಆಂಟೋನಿಯೊ ಕಳವಳ

ಸಿರಿಯದಲ್ಲಿ ನೆಲೆಸಿರುವ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಅಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುವುದನ್ನು ತಡೆಯಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಿರಿಯದ ಡೌಮ ನಗರದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದಿದೆಯೆನ್ನಲಾದ ರಾಸಾಯನಿಕ ದಾಳಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಭದ್ರತಾ ಮಂಡಳಿ ವಿಫಲವಾದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಭದ್ರತಾ ಮಂಡಳಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾನು ನಿಕಟವಾಗಿ ಗಮನಿಸುತ್ತಿದ್ದೆನೆ ಹಾಗೂ ಈ ವಿಷಯದಲ್ಲಿ ಈತನಕ ನಿರ್ಧಾರವೊಂದಕ್ಕೆ ಬರಲು ಭದ್ರತಾ ಮಂಡಳಿಗೆ ಅಸಾಧ್ಯವಾಗಿರುವುದಕ್ಕೆ ವಿಷಾದಿಸುತ್ತೇನೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News