ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಎಂಟ್ರಿ ಕೊಟ್ಟ ಮುಝಮ್ಮಿಲ್ ಕಾಝಿಯಾ, ಬಿಜೆಪಿಯ ಎರಡು ಬಣಗಳಲ್ಲಿ ವಾಟ್ಸ್ಆ್ಯಪ್ ಸಮರ ?
ಭಟ್ಕಳ, ಎ. 12: ಇನ್ನೇನು ವಿಧಾನಸಭಾ ಚುನಾವಾಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿ ಅಭ್ಯರ್ಥಿಗಳಿಗೆ ಹೈಕಮಾಂಡ್ ಗಳಿಂದ ಇನ್ನೂ ಗ್ರೀನ್ ಸಿಗ್ನಲ್ ದೊರೆಯದೆ ಹೃದಯಬಡಿತ ಹೆಚ್ಚಾಗುತ್ತಿದ್ದು ರಾಜಕೀಯ ತಾಪಮಾನ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ತಿಳಿದುಬಂದಿದೆ.
ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್ ಹೊರತು ಪಡಿಸಿ ಬೇರೆ ಯಾವ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಫೈನಲ್ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಶಾಸಕ ಮಾಂಕಾಳು ವೈದ್ಯರೇ ಏಕಚಕ್ರಾಧಿಪತ್ಯವನ್ನು ಸಾಧಿಸಿದ್ದು, ಅವರೊಬ್ಬರು ಮಾತ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲಿಗೆ ಒಂದಿಬ್ಬರ ಹೆಸರು ಕೇಳಿ ಬಂದಿತ್ತಾದರೂ ನಂತರ ಅವರು ನಾಪತ್ತೆಯಾಗಿದ್ದರು. ಬಿಜೆಪಿಯಲ್ಲಿ ಹತ್ತಾರು ಮಂದಿ ಆಕಾಂಕ್ಷಿಗಳಿದ್ದು ಈಗ ಅದು ಕೇವಲ ಇಬ್ಬರಿಗೆ ಮಾತ್ರ ಸೀಮಿತಗೊಂಡಿದೆ. ಇಬ್ಬರೂ ಕೂಡ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದಿದ್ದು, ಸಂಘಪರಿವಾರ ಮೂಲದ ಕಾರ್ಯಕರ್ತರನ್ನು ಹೈಕಮಾಂಡ್ ಕಡೆಗಣಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದ ಜೆ.ಡಿ.ನಾಯ್ಕ, ಕಾಂಗ್ರೆಸ್ ನ ಯುವ ಮುಖಂಡ ಸುನಿಲ್ ನಾಯ್ಕ ಈಗ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಹಾಗೆ ಅಭ್ಯರ್ಥಿಯ ಪ್ರಭಲ ದಾವೆದಾರರೂ ಆಗಿದ್ದು ಬಿಜೆಪಿ ಎರಡು ಬಣದಲ್ಲಿ ಹರಿದು ಹಂಚಿಹೋಗಿದೆ. ಕಾಂಗ್ರೆಸ್ ನಲ್ಲಿ ಪಕ್ಷದ ವರ್ಚಸ್ಸಿಗಿಂತ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿದ್ದ ಮಾಂಕಾಳು ವೈದ್ಯ ಈಗ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿದ್ದಾರೆ ಅವರು ತಮ್ಮ ಹೆಸರಿನ ಕುದುರೆಯನ್ನು ಓಡಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಿಂತ ಹೆಚ್ಚು ಮಾಂಕಾಳ್ ಮಂತ್ರವನ್ನು ಜಪಿಸುತ್ತಿದ್ದಾರೆ. ಮಾಂಕಾಳುಗೆ ಎದುರಾಳಿಯೇ ಇಲ್ಲ ಎನ್ನುವ ಸ್ಥಿತಿ ನಿಮಾರ್ಣವಾಗಿದ್ದು ಈಗ ಕಾಂಗ್ರೆಸ್ ನಿಂದಲೇ ಮತ್ತೊಬ್ಬ ಅಭ್ಯರ್ಥಿಯು ತಾನೂ ಒಬ್ಬ ಪ್ರಭಲ ಟಿಕೆಟ್ ಆಕಾಂಕ್ಷಿ ಎಂದು ಹೇಳುವುದರ ಮೂಲಕ ಭಟ್ಕಳ ರಾಜಕೀಯ ವಾತಾವರಣದಲ್ಲಿ ತಾಪಮಾನವೇರುವಂತೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಎಂಟ್ರಿ ಕೊಟ್ಟ ಮುಝಮ್ಮಿಲ್ ಕಾಝಿಯಾ: ಭಟ್ಕಳದಲ್ಲಿ ನಾಮಧಾರಿಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಮತದಾರರು ಎಂದರೆ ಅದು ಇಲ್ಲಿನ ಮುಸ್ಲಿಮರು. 60 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮುಸ್ಲಿಮ್ ಸಮುದಾಯ ದಿವಂಗತ ಶಮ್ಸುದ್ದೀನ್ ಜುಕಾಕೋ, ಎಸ್.ಎಂ.ಯಾಹ್ಯಾ ನಂತರ ಮೊತ್ತಬ್ಬ ಶಾಸಕನನ್ನು ಕಂಡಿಲ್ಲ. ಕಳೆದ ಹಲವು ವರ್ಷಗಳಿಂದಲೂ ಇವರು ಕೇವಲ ಕಾಂಗ್ರೆಸ್ ಮತದಾರರಾಗಿಯೇ ಉಳಿದುಕೊಂಡಿದ್ದಾರೆ. ಕಳೆದ ಬಾರಿ ಜೆ.ಡಿ.ಎಸ್. ನಿಂದ ಮುಸ್ಲಿಮ ಅಭ್ಯರ್ಥಿ ಹಾಕಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಈ ಬಾರಿ ಭಟ್ಕಳದ ರಾಜಕೀಯ, ಸಾಮಾಜಿಕ ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಮುಸ್ಲಿಮ್ ಅಭ್ಯರ್ಥಿಗೆ ಕಾಂಗ್ರೆಸ್ ನೀಡಬೇಕು ಎಂದು ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಒತ್ತಡವನ್ನು ಹಾಕುತ್ತಿದ್ದಾರೆ. ಒಂದು ವೇಳೆ ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ ಎಂದಾರೆ ಬೇರೆ ಪಕ್ಷದಿಂದ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಬುಧವಾರ ಸಂಜೆ ತಂಝೀಮ್ ಸಂಸ್ಥೆಯ ಪೊಲಿಟಿಕಲ್ ಪೆನಲ್ ಸಭೆ ಸೇರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಬಿ.ಕೆ.ಹರಿಪ್ರಸಾದ್ ರವರಿಗೆ ದೂರವಾಣಿ ಮೂಲಕ ತಮ್ಮ ಬೇಡಿಕೆಯನ್ನು ಇಟ್ಟಿದ್ದು ಅದಕ್ಕೆ ಅವರು ಸ್ಪಂಧಿಸಿರುವುದಾಗಿ ಮೂಲಗಳು ದೃಢಪಡಿಸಿವೆ. ಇದುವರೆಗೆ ಕೇವಲ ಬಿಜೆಪಿಯಲ್ಲಿ ಮಾತ್ರ ಟಿಕೆಟ್ ಕಸರತ್ತು ನಡೆಯುತ್ತಿತ್ತು ಈಗ ಕಾಂಗ್ರೆಸ್ ನಲ್ಲೂ ಟಿಕೇಟ್ ಕಸರತ್ತು ಶುರುವಾಗಿದ್ದು ಮದಾರರಿಗೆ ಮನರಂಜನೆ ನೀಡುತ್ತಿದೆ.
ಭಟ್ಕಳದಲ್ಲಿ ಕಳೆದ 1994ರಲ್ಲಿ ಡಾ. ಚಿತ್ತರಂಜನ್ ಅವರು ಬಿ.ಜೆ.ಪಿ.ಗೆ ಗೆಲುವು ತಂದು ಕೊಡುವ ಮೂಲಕ ಪ್ರಥಮವಾಗಿ ಭಾರತೀಯ ಜನತಾ ಪಾರ್ಟಿ ವಿಧಾನ ಸಭೆಯಲ್ಲಿ ಭಟ್ಕಳವನ್ನು ಪ್ರತಿನಿಧಿಸುವಂತೆ ಮಾಡಿದ್ದರು. ನಂತರದ ಎರಡು ಬಾರಿ ಶಿವಾನಂದ ನಾಯ್ಕ ಅವರು ಪ್ರತಿನಿಧಿಸಿದ್ದರು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಿದ್ದರೆ, 2013ರ ಚುನಾವಣೆಯಲ್ಲಿ ಯಡ್ಯೂರಪ್ಪನವರು ಕೆ.ಜೆ.ಪಿ. ರಚಿಸಿದ್ದರಿಂದ ಶಿವಾನಂದ ನಾಯ್ಕ ಅವರು ಕೆ.ಜೆ.ಪಿ.ಯಿಂದ ಚುನಾವಣೆಗೆ ಸ್ಪರ್ಧಿಸಿ ಸೋತರು. ಈ ಬಾರಿ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಶಿವಾನಂದ ನಾಯ್ಕ ಸೇರಿದಂತೆ ಅನೇಕರ ಹೆಸರಿದ್ದರೂ ಸಹ ಮುಂದುವರಿಯುತ್ತಿದ್ದಂತೆಯೇ ಆಕಾಂಕ್ಷಿಗಳ ಪಟ್ಟಿಯಿಂದ ಹೊರಗಿಟ್ಟು ಕೇವಲ ಮೂವರ ಹೆಸರು ಕೇಂದ್ರ ಸಮಿತಿಗೆ ಹೋಗಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಬಿ.ಜೆ.ಪಿ. ಪಕ್ಷವನ್ನು ಕಟ್ಟಿ ಬೆಳೆಸಿದವರು, ಹಿಂದುತ್ವಕ್ಕಾಗಿ ಹೋರಾಡಿದವರು ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರೂ ಕೂಡಾ ಅವರನ್ನು ಕೈಬಿಟ್ಟಿರುವುದು ಪಕ್ಷದಲ್ಲಿ ಆಂತರಿಕವಾಗಿ ಬೇಸರ ವ್ಯಕ್ತವಾಗಿದ್ದರೂ ಕಾರ್ಯಕರ್ತರದ್ದು ಕೂಡಾ ಸ್ವಾರ್ಥ ರಹಿತ ರಾಜಕಾರಣವಾದ್ದರಿಂದ ಯಾರೂ ಕೂಡಾ ಆಕ್ಷೇಪಿಸುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ. ಟಿಕೆಟ್ ಘೋಷಣೆಯಾಗುತ್ತಲೇ ಒಮ್ಮೆಲೇ ಬಿ.ಜೆ.ಪಿ. ಕಾರ್ಯಕರ್ತರಲ್ಲಿ ಅವರಿಗೆ ಕೊಡಬೇಕಾಗಿತ್ತು ಇವರಿಗೆ ಕೊಡಬೇಕಾಗಿತ್ತು ಎನ್ನುವ ಬೇಸರ ಸ್ಪೋಟಗೊಂಡು ಅಸಮಾಾನಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.
ಈಗಾಗಲೇ ಶಾಸಕರಾಗಿ ಆಯ್ಕೆಯಾಗಿ, ಸಚಿವರೂ ಆಗಿ ಕೆಲಸ ಮಾಡಿದ ಶಿವಾನಂದ ನಾಯ್ಕ ಅವರು ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅನೇಕ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕನಸು ಎನ್ನುವ ಸಮಯದಲ್ಲಿ ಭಟ್ಕಳ ಹಾಗೂ ಮಂಕಿಗಳಲ್ಲಿ ಪಿ.ಯು.ಸಿ. ಹಾಗೂ ಪದವಿ ಕಾಲೇಜುಗಳನ್ನು ತೆರೆದು ಅವರ ಕನಸು ನನಸು ಮಾಡಿದ ಅವರು ಅಭಿವೃದ್ಧಿಯಲ್ಲಿಯೂ ಸಾಕಷ್ಟು ಮುಂದೆ ಇದ್ದರು ಎನ್ನುವುದು ಕಾರ್ಯಕರ್ತರ ಅಂಬೋಣ. ಅವರ ಹೆಸರು ಪಟ್ಟಿಯಲ್ಲಿದ್ದರೂ ಸಹ ರಾಜ್ಯ ಹಾಗೂ ಕೇಂದ್ರ ಸಮಿತಿಯಲ್ಲಿ ಎನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈಗಾಗಲೇ ಕಳೆದ ಒಂದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದಿಂದ ಬಿ.ಜೆ.ಪಿ. ಸೇರಿ ಪಕ್ಷದಲ್ಲಿ ನಿಷ್ಟೆಯಿಂದ ಕೆಲಸವನ್ನು ಮಾಡುತ್ತಾ ಕಾರ್ಯಕರ್ತರನ್ನು ಮತದಾರರನ್ನು ಮುಟ್ಟಿರುವ ಯುವ ನಾಯಕ ಸುನಿಲ್ ನಾಯ್ಕ ಕ್ಷೇತ್ರದಲ್ಲಿ ನಾನೇ ಬಿ.ಜೆ.ಪಿ. ಅಭ್ಯರ್ಥಿ ಎಂದು ಬಿಂಬಿಸಿ ಕೊಂಡಿದ್ದಲ್ಲದೇ ಯುವಕರ ಪಡೆಯನ್ನು ಕೂಡಾ ಸಿದ್ದಪಡಿಸಿಕೊಂಡು ಪ್ರಚಾರಕ್ಕೆ ಇಳಿದಿದ್ದರು. ಚುನಾವಣಾ ದಿನಾಂಕ ಘೋಷಣೆಯಾಗುವ ಪೂರ್ವ ಕ್ಷೇತ್ರದ ಎಲ್ಲಾ ಬೂತ ಮಟ್ಟದ ಕಾರ್ಯಕರ್ತರನ್ನು ಭೇಟಿಯಾದವರಲ್ಲಿ ಇವರೇ ಮೊದಲಿಗರು ಎಂದರೂ ತಪ್ಪಾಗಲಾರದು. ಆದರೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಲೇ ಬಿ.ಜೆ.ಪಿ.ಯ ಆಂತರಿಕ ಚಟುವಟಿಕೆ ಚುರುಕುಗೊಳ್ಳುತ್ತಲೇ ಟಿಕೆಟ್ ಆಕಾಂಕ್ಷಿಗ ಪಟ್ಟಿಯಲ್ಲಿ ತನ್ನದಲ್ಲದೇ ಇನ್ನೂ ಹೆಸರಿರುವುದನ್ನು ತಿಳಿದು ಸುನಿಲ್ ನಾಯ್ಕ ಗಾಬರಿಯಾಗುವುದರೊಂದಿಗೆ ತಮ್ಮನ್ನು ಪಕ್ಷಕ್ಕೆ ಕರೆ ತಂದ ಕೇಂದ್ರ ಸಚಿವರ ಹಿಂದೆ ಬಿದ್ದಿದ್ದು ಗುಟ್ಟಾಗಿ ಉಳಿದಿಲ್ಲ. ಟಿಕೆಟ್ ದೊರೆಯದಿದ್ದರೂ ಕೂಡಾ ಸ್ಪರ್ಧೆ ಮಾಡುವುದು ಖಚಿತ ಎನ್ನುವ ಕುರಿತು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದು ಎಷ್ಟು ಸತ್ಯ ಎನ್ನುವುದು ಟಿಕೆಟ್ ಘೋಷಣೆಯಾದ ನಂತರವೇ ತಿಳಿದು ಬರಬೇಕಿದೆ. ಬಿ.ಜೆ.ಪಿ.ಯಲ್ಲೇನಾದರೂ ಬಂಡಾಯ ಅಭ್ಯರ್ಥಿ ಕಣಕ್ಕಿಳಿದರೆ ಅದರ ನೇರ ಲಾಭವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ ಎಂದು ಕೇಳಿ ಬರುತ್ತಿದೆ.
ಇತ್ತ ಪಟ್ಟಿಯಲ್ಲಿರುವ ಇನ್ನೊಂದು ಹೆಸರು ಜೆ.ಡಿ. ನಾಯ್ಕ ಅವರದ್ದು. ಮಾಜಿ ಶಾಸಕರು, ಹಿಂದುತ್ವಕ್ಕಾಗಿ ಈ ಹಿಂದೆ ಕೆಲಸ ಮಾಡಿದವರೂ ಆದ ಜೆ.ಡಿ. ನಾಯ್ಕ ಅವರ ಹೆಸರೂ ಕೂಡಾ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವುದು ಇನ್ನು ಹಲವಾರು ಕಾರ್ಯಕರ್ತರಿಗೆ ಹುರಿದುಂಬಿಸಿದಂತಾಗಿತ್ತು. ಅಂತಿಮವಾಗಿ ಮೂವರಲ್ಲಿ ಯಾರ ಹೆಸರು ಘೋಷಣೆಯಾದರೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ದರೂ ಕೂಡಾ ಬಿ.ಜೆ.ಪಿ.ಯಲ್ಲಿಯೇ ಸುನಿಲ್ ನಾಯ್ಕ ವಿರುದ್ಧ ಒಂದು ಗುಂಪು ವಿರೋಧ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಟಿಕೆಟ್ ಹಂಚಿಕೆಯ ಪೂರ್ವದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಮುಂದಿನ ನಡೆ ಏನು ಎನ್ನುವ ಕುರಿತು ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಿ.ಜೆ.ಪಿ.ಯಲ್ಲಿ ಆಂತರಿಕ ಕಾರಣಕ್ಕಾಗಿ ಈ ಹಿಂದೆ ಒಂದು ಗುಂಪು ಗುಟ್ಟಾಗಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದನ್ನು ಕಾರ್ಯಕರ್ತರು ಇನ್ನೂ ಮರೆತಿಲ್ಲ.