ಸಿರಿಯ ಮೇಲೆ ದಾಳಿ: ಟ್ರಂಪ್ ನಿರ್ಧಾರ ಸಡಿಲ
ವಾಶಿಂಗ್ಟನ್, ಎ. 12: ಸಿರಿಯದ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ರಶ್ಯಕ್ಕೆ ಎಚ್ಚರಿಕೆ ನೀಡಿದ ಬಳಿಕ, ತನ್ನ ಆವೇಶಭರಿತ ಮಾತುಗಳ ತೀವ್ರತೆಯನ್ನು ಕಡಿಮೆ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದ್ದಾರೆ.
‘‘ಸಿರಿಯದ ಮೇಲೆ ದಾಳಿ ಯಾವಾಗ ನಡೆಯುತ್ತದೆ ಎನ್ನುವುದನ್ನು ನಾನು ಯಾವತ್ತೂ ಹೇಳಿಲ್ಲ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ‘‘ಅತ್ಯಂತ ಶೀಘ್ರವಾಗಿ ದಾಳಿ ನಡೆಯಬಹುದು ಅಥವಾ ಅಷ್ಟು ಶೀಘ್ರವಾಗಿ ನಡೆಯದಿರಬಹುದು’’ ಎಂದಿದ್ದಾರೆ.
‘‘ಏನೇ ಆದರೂ, ನನ್ನ ಆಡಳಿತದ ಅಮೆರಿಕವು ಸಿರಿಯದಿಂದ ಐಸಿಸನ್ನು ಹೊರಗಟ್ಟಿ ಒಳ್ಳೆಯ ಕೆಲಸ ಮಾಡಿದೆ. ನಮ್ಮ ‘ಥ್ಯಾಂಕ್ ಯೂ ಅಮೆರಿಕ’ ಎಲ್ಲಿದೆ?’’ ಎಂದು ಬಳಿಕ ವಿಷಯಾಂತರ ಮಾಡಿದ್ದಾರೆ.
ಅಮೆರಿಕದ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗುವುದು ಎಂಬ ರಶ್ಯದ ಹೇಳಿಕೆಗೆ ಟ್ರಂಪ್ ಬುಧವಾರ ಕೋಪದಿಂದ ಪ್ರತಿಕ್ರಿಯಿಸಿದ್ದರು. ‘‘ತಯಾರಾಗಿರು ರಶ್ಯ. ಯಾಕೆಂದರೆ, ಅವುಗಳು (ಕ್ಷಿಪಣಿಗಳು) ಬರುತ್ತಿವೆ (ಸಿರಿಯದತ್ತ). ಹೊಸ, ಚಂದದ ಮತ್ತು ಚಾಣಾಕ್ಷ ಕ್ಷಿಪಣಿಗಳು. ತನ್ನದೇ ಜನರನ್ನು ವಿಷಾನಿಲ ಹಾಯಿಸಿ ಕೊಂದು ಆನಂದಿಸುವ ರಾಕ್ಷಸನ ಪರವಾಗಿ ನೀವು ನಿಲ್ಲಬಾರದಿತ್ತು’’ ಎಂದು ಟ್ರಂಪ್ ಬುಧವಾರ ಟ್ವೀಟ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ವಿಷಾನಿಲ ಬಳಕೆಗೆ ನಮ್ಮಲ್ಲಿ ಪುರಾವೆ: ಮ್ಯಾಕ್ರೋನ್
ಡೌಮದ ನಾಗರಿಕರ ಮೇಲೆ ಸಿರಿಯ ಅಧ್ಯಕ್ಷ ಬಶರ್ ಅಲ್-ಅಸಾದ್ ಸರಕಾರ ವಿಷಾನಿಲ ಪ್ರಯೋಗಿಸಿರುವುದಕ್ಕೆ ತನ್ನ ಬಳಿ ಪುರಾವೆಯಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಗುರುವಾರ ಹೇಳಿದ್ದಾರೆ ಹಾಗೂ ಇದಕ್ಕೆ ತನ್ನ ಪ್ರತಿಕ್ರಿಯೆಯನ್ನು ಸರಿಯಾದ ಸಮಯದಲ್ಲಿ ತಿಳಿಸುವುದಾಗಿ ಘೋಷಿಸಿದ್ದಾರೆ.
‘‘ಕಳೆದ ವಾರ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆ ಹಾಗೂ ಇದನ್ನು ಬಶರ್ ಅಲ್-ಅಸಾದ್ ಸರಕಾರ ಬಳಸಿದೆ ಎನ್ನುವುದಕ್ಕೆ ನಮ್ಮ ಬಳಿ ಪುರಾವೆಯಿದೆ’’ ಎಂದು ಫ್ರಾನ್ಸ್‌ನ ‘ಟಿಎಫ್1’ ಟೆಲಿವಿಶನ್‌ಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರೋನ್ ಹೇಳಿದ್ದಾರೆ.