ಎ.14ರಂದು ‘ಬಿಸುತ ಪೊಲಬು’ಸೌಹಾರ್ದ ವಿಷು ಆಚರಣೆ
ಉಪ್ಪಿನಂಗಡಿ, ಎ. 12: ನಮ್ಮೂರು - ನೆಕ್ಕಿಲಾಡಿ ಸಂಘಟನೆಯ ವತಿಯಿಂದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕದ ಸಾರ್ವಜನಿಕ ಮೈದಾನದಲ್ಲಿ ಎ.14ರಂದು ‘ಬಿಸುತ ಪೊಲಬು’ ಸೌಹಾರ್ದಯುತವಾಗಿ ವಿಷು ಆಚರಣೆ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 9:30ಕ್ಕೆ ಸಾಮೂಹಿಕವಾಗಿ ಕಣಿಯಿಟ್ಟ ಬಳಿಕ ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ‘ನಮ್ಮೂರು- ನೆಕ್ಕಿಲಾಡಿ’ಯ ಗೌರವಾಧ್ಯಕ್ಷ ರಾಧಾಕೃಷ್ಣ ನಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ 34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಶ್ರೀಮತಿ ರತಿ ಎಸ್. ನಾಯ್ಕ, ಉದ್ಯಮಿ ಧನ್ಯಕುಮಾರ್ ರೈ, ವೈದ್ಯರಾದ ಡಾ. ನಿರಂಜನ್ ರೈ, ಡಾ. ರಾಜಾರಾಮ್ ಕೆ.ಬಿ. ಭಾಗವಹಿಸಲಿದ್ದಾರೆ. ಈ ಸಂದರ್ಭ ಸಾಧಕರಾದ ರಾಮಣ್ಣ ರೈ ಅಲಿಮಾರ್, ಹಾಜಿ ಆದಂ ಕುಂಞಿ ಕೊಡಿಪ್ಪಾಡಿ, ಶ್ರೀಮತಿ ಸೆವರಿನ್ ಮಸ್ಕರೇನ್ಹಸ್ ನೆಕ್ಕಲ ಹಾಗೂ ಫ್ರಾನ್ಸಿಸ್ ಅನಿಲ್ ಮೆನೇಜಸ್ ಅವರನ್ನು ಸನ್ಮಾನಿಸಲಾಗುವುದು. 12:30ಕ್ಕೆ ‘ಬಿಸುತ ವನಸ್’ ನಡೆಯಲಿದೆ.
‘ನಮ್ಮೂರು- ನೆಕ್ಕಿಲಾಡಿ’ಯು ಸೌಹಾರ್ದಯುತ ಗ್ರಾಮಾಭ್ಯುದಯದ ಧ್ಯೇಯದೊಂದಿಗೆ ಜಾತಿ, ಮತ, ಧರ್ಮ, ರಾಜಕೀಯ ಭೇದ ರಹಿತವಾಗಿ ಎಲ್ಲಾ ಸಮಾನ ಮನಸ್ಕರನ್ನೊಳಗೊಂಡ ಸಂಘಟನೆಯಾಗಿದ್ದು, ತುಳುನಾಡಿನ ಸಂಸ್ಕೃತಿಯು ಕೂಡಾ ಸಾಮರಸ್ಯದ ಸಂದೇಶ ಬೀರುವ ಸಂಸ್ಕೃತಿಯಾಗಿದೆ. ಆದ್ದರಿಂದ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ವಿಷು ಹಬ್ಬವನ್ನು ಆಚರಿಸಲಾಗುತ್ತದೆ. ತಾವು ಮನೆಯಲ್ಲಿ ಬೆಳೆದ ಫಲವಸ್ತುಗಳನ್ನು ಎಲ್ಲಾ ಧರ್ಮದವರು ತಂದು ಕಣಿ ಇಡಲು ಕಾರ್ಯ ಕ್ರಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.