ಬಂಟ್ವಾಳದಲ್ಲಿ ಇನ್ನೂ ಬಾರದ ನೀರು: ಪುರಸಭೆ ವಿರುದ್ಧ ಹೆಚ್ಚಿದ ಆಕ್ರೋಶ
ಬಂಟ್ವಾಳ, ಎ. 12: ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್, ಕೈಕಂಬ, ಕಾಮಾಜೆ, ಶಾಂತಿಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ 6ನೇ ದಿನವೂ ನೀರು ಪೂರೈಸಲು ಬಂಟ್ವಾಳ ಪುರಸಭೆಯೂ ಸಂಪೂರ್ಣವಾಗಿ ವಿಫಲವಾಗಿದೆ. ಹನಿ ನೀರಿಗಾಗಿ ಈ ಭಾಗದ ಜನರು ಪರದಾಡುತ್ತಿದ್ದು, ಪುರಸಭೆ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಬಿ.ಸಿ.ರೋಡ್, ಕೈಕಂಬ ಪ್ರದೇಶವು ಬಂಟ್ವಾಳ ತಾಲೂಕಿನ ಹೃದಯ ಭಾಗವಾಗಿದೆ. ಅಲ್ಲದೆ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ವ್ಯವಹಾರಿಕ ಕೇಂದ್ರವಾಗಿದ್ದು, ಆಸ್ಪತ್ರೆಗಳು, ಹಲವು ವಾಣಿಜ್ಯ ಸಂಕೀರ್ಣಗಳು ಈ ಪ್ರದೇಶದಲ್ಲಿವೆ.
ಗುರುವಾರವು ನೀರಿಲ್ಲದ ಕಾರಣ ಈ ಭಾಗದ ಭಾಗಶಃ ಹೊಟೇಲ್‌ಗಳು ಮುಚ್ಚಿದ್ದವು. ಇನ್ನುಳಿದ ಸಣ್ಣ ಪುಟ್ಟ ಅಂಗಡಿಗಳಿಗೆ ಪುರಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಸಾರ್ವಜನಿಕರು, ವಿವಿಧ ಕಚೇರಿಗಳಲ್ಲಿ ದುಡಿಯುತ್ತಿರುವ ಮಹಿಳಾ ಸಿಬ್ಬಂದಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಮೇಲ್ಸೆತುವೆಯ ಅಡಿಭಾಗದಲ್ಲಿ ಪೈಪ್‌ಲೈನ್ ಹಾದುಹೋಗಿದೆ. ರಸ್ತೆ ಕಾಮಗಾರಿ ಸಂದರ್ಭದಲ್ಲಿ ಈ ಪೈಪ್ ಲೈನ್ ಅನ್ನು ತೆರವು ಮಾಡದೇ ಅದರ ಮೇಲೆ ಮಣ್ಣು ಹಾಕಿ ಮೇಲ್ಸೆತುವೆ ರಸ್ತೆಯನ್ನು ನಿರ್ಮಿಸಲಾಗಿದೆ. ಮಣ್ಣಿನ ಒತ್ತಡದಿಂದ ಪೈಪ್ ಒಡೆದು ನೀರು ಸೋರಿಕೆಯಾಗಿದೆ. ಇದೀಗ ಕ.ನ.ನೀ.ಸ.ಒ.ಮಂಡಳಿಯ ಹೊಸ ಪೈಪುಲೈನುಗಳಿಗೆ ಪುಸರಭೆಯ ಹಳೆಯ ಪೈಪ್‌ಲೈನ್ ಅನ್ನು ಜೋಡಿಸುವ ಮೂಲಕ ನೀರು ಪೂರೈಕೆ ಮಾಡಲಾಗುವುದು. ಇದರ ಕಾಮಗಾರಿ ನಡೆಯುತ್ತಿದೆ ಎಂದು ಪುರಸಭಾ ಅಧಿಕಾರಿಗಳು ತಿಳಿಸಿದ್ದಾರೆ.
ಸೋರಿಕೆ ಪತ್ತೆ: ನೀರು ಸೋರಿಕೆ ಪತ್ತೆಗಾಗಿ ಜೆಸಿಬಿ ಮೂಲಕ ಇದ್ದ ಕಡೆಯೆಲ್ಲ ರಸ್ತೆಯನ್ನು ಅಗೆಲಾಯಿತಾದರೂ, ಬುಧವಾರದವರೆಗೂ ಸಾಧ್ಯವಾಗಿಲ್ಲ. ಆದರೆ ಸಮಸ್ಯೆ ಎಲ್ಲಿ ಎಂಬದನ್ನು ಹುಡುಕಾಡಲು ನಾಲ್ಕು ದಿನಗಳು ಬೇಕಾದವು. ರಾಷ್ಟ್ರೀಯ ಹೆದ್ದಾರಿಯ ಮೇಲ್ಸೆತುವೆ ಪಕ್ಕದ ಭಾಗದಲ್ಲಿ ತೊಂದರೆ ಇರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಸರಿಪಡಿಸುವ ಕಾರ್ಯ ನಡೆಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ಒಳಚರಂಡಿ ಮಂಡಳಿ ಹೊಸದಾಗಿ ಅಳವಡಿದ ಪೈಪ್‌ಲೈನ್ ಮೂಲಕ ಗೂಡಿನಬಳಿಯಲ್ಲಿರುವ ನೆಲಮಟ್ಟದ ಸಂಗ್ರಹಾಗಾರದಿಂದ ಪುರಸಭೆ ಬಿ.ಸಿ.ರೋಡಿಗೆ ನೀರು ಸರಬರಾಜು ಮಾಡುತ್ತಿದೆ.