×
Ad

ಕಾಮನ್‌ವೆಲ್ತ್ ಕುಸ್ತಿ: ಪೂಜಾಗೆ ಬೆಳ್ಳಿ, ದಿವ್ಯಾಗೆ ಕಂಚು

Update: 2018-04-13 14:53 IST

ಗೋಲ್ಡ್‌ಕೋಸ್ಟ್,ಎ.13: ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳಾ ಕುಸ್ತಿ ವಿಭಾಗದಲ್ಲಿ ಪೂಜಾ ಧಂಡ ಹಾಗೂ ದಿವ್ಯಾ ಕಾಕ್ರನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ನೈಜೀರಿಯದ ಒಡುನಾಯೊ ಅಡ್ಕುರೊಯೆ ವಿರುದ್ಧ ಶರಣಾದ ಪೂಜಾ ಬೆಳ್ಳಿ ಪದಕ ಜಯಿಸಿದರು.

24ರ ಹರೆಯದ ಹರ್ಯಾಣ ಹಿಸಾರ್ ಜಿಲ್ಲೆಯ ಗುಡಾನ ಗ್ರಾಮದ ಕುಸ್ತಿತಾರೆ ಪೂಜಾ ಕುಸ್ತಿಯಲ್ಲಿ ಹೆಚ್ಚಿನ ಗಮನ ನೀಡುವ ಸಲುವಾಗಿ ಹಿಂದಿಯ ಖ್ಯಾತ ಚಿತ್ರ ‘ದಂಗಲ್’ನಲ್ಲಿ ನಟಿಸುವ ಅವಕಾಶವನ್ನು ತಿರಸ್ಕರಿಸಿದ್ದರು.

ಪೂಜಾ ಫೈನಲ್‌ಗೆ ಪ್ರವೇಶಿಸುವ ಮೊದಲು ಕೆನಡಾದ ಎಲಿಮಿ, ನ್ಯೂಝಿಲೆಂಡ್‌ನ ಅನಾ ಹಾಗೂ ಕ್ಯಾಮರೂನ್‌ನ ಜೋಸೆಫ್‌ರನ್ನು ಮಣಿಸಿದ್ದರು.

 ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ದಿವ್ಯಾ ಕಂಚಿನ ಪದಕ ಜಯಿಸಿದರು. ಮೊದಲ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿರುವ ದಿವ್ಯಾ ತನ್ನ ಮೊದಲ ಪಂದ್ಯದಲ್ಲಿ ಕ್ಯಾಮರೂನ್‌ನ ಅಲ್ಕಾಮೆ ಅಂಝಾಂಗ್‌ರನ್ನು ಮಣಿಸಿದ್ದರು. ದಿವ್ಯಾ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಬಾಂಗ್ಲಾದೇಶದ ಶೆರಿನ್ ಸುಲ್ತಾನ್‌ರನ್ನು ಕೇವಲ 36 ಸೆಕೆಂಡ್‌ನಲ್ಲಿ ಸೋಲುಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News