×
Ad

ಅವಿಭಜಿತ ಜಿಲ್ಲೆಯಲ್ಲಿ ‘ತುಳುನಾಡ್’ ಸ್ವತಂತ್ರ ಪಕ್ಷದ ಸ್ಪರ್ಧೆ: ಪುತ್ತೂರು ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿ ಘೋಷಣೆ

Update: 2018-04-13 21:20 IST

ಪುತ್ತೂರು, ಎ. 13: ತುಳುನಾಡಿನ ನೆಲ,ಜಲ, ಭಾಷೆ, ಸಂಸ್ಕೃತಿ ಹಾಗೂ ತುಳು ಧರ್ಮ ಉಳಿವಿಗಾಗಿ ತುಳುನಾಡ್ ಸ್ವತಂತ್ರ ಪಕ್ಷ ಅಸ್ಥಿತ್ವಕ್ಕೆ ಬಂದಿದ್ದು, ಪುತ್ತೂರು ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಎ.14ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಘೋಷಣೆ ಆಗಲಿದೆ ಎಂದು ತುಳುನಾಡ್ ಸ್ವತಂತ್ರ ಪಕ್ಷದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್ ಅವರು ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಪಕ್ಷಗಳು ಅನುಮೋದನೆ ನೀಡಿ ಬಳಿಕ ಪ್ರತಿಭಟನೆ ನಾಟಕವಾಡುತ್ತಿದೆ. ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುತ್ತಿಲ್ಲ. ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಆ ಪಕ್ಷದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ತುಳುನಾಡ್ ಸ್ವತಂತ್ರ ಪಕ್ಷ ಸ್ಥಾಪಿಸಲಾಗಿದ್ದು, ಈಗಾಗಲೇ ಕಾರ್ಕಳ ಕ್ಷೇತ್ರದಿಂದ ಸುಮಂತ್ ಕೆ ಪೂಜಾರಿ ಎಂಬ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಪುತ್ತೂರಿನಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಯಲು ನಿರ್ಧರಿಸಲಾಗಿದೆ, ಮುಂದಿನ ಕೆಲವೇ ದಿನಗಳಲ್ಲಿ ಬೆಳ್ತಂಗಡಿ, ಸುರತ್ಕಲ್ ಸೇರಿದಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತುಳು ನೆಲ ಜಲ ಭಾಷೆಗೆ ಅಪಾಯ

ತುಳು ನೆಲ, ಜಲ ಮತ್ತು ಭಾಷೆಗೆ ಅಪಾಯ ಎದುರಾಗಿದ್ದು, ಇದುವರೆಗೆ ಇಲ್ಲಿನ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಒತ್ತಾಯಿಸುತ್ತಾ ಬರಲಾಗಿದ್ದರೂ, ಅವರು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಚುನಾವಣಾ ಸಮಯದಲ್ಲಿ ಆಶ್ವಾಸನೆ ಮಾತ್ರ ನೀಡುತ್ತಿದ್ದರೂ ಬೇಡಿಕೆ ಈಡೇರಿಸುತ್ತಿಲ್ಲ. ಇನ್ನುಮುಂದೆ ಅವರ ಆಶ್ವಾಸನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ತುಳು ಭಾಷೆ ನೆಲ,ಜಲ ಉಳಿಸಲು ಪಕ್ಷದ ಬಲದಿಂದ ಮಾತ್ರ ಸಾಧ್ಯವಾಗಿದ್ದು ಅದಕ್ಕಾಗಿ ತುಳುನಾಡ್ ಸ್ವತಂತ್ರ ಪಕ್ಷ ಸ್ಥಾಪಿಸಲಾಗಿದೆ ಎಂದು ಶೈಲೇಶ್ ಅವರು ತಿಳಿಸಿದ್ದಾರೆ.

ತುಳುನಾಡಿನ ಪ್ರಗತಿಯನ್ನು ಕರ್ನಾಟಕ ಸರ್ಕಾರ ಹಾಗೂ ಕೇರಳ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ಕಡೆಗಣಿಸಿದೆ. ತುಳುನಾಡಿಗೆ ವಿನಾಶಕಾರಿ ಕೈಗಾರಿಕೆಗಳನ್ನು ತರುತ್ತಾರೆಯೇ ವಿನಃ ಜ್ಞಾನಾಧಾರಿತ ಉದ್ಯಮಗಳನ್ನು ಸ್ಥಾಪಿಸುವಲ್ಲಿ ವಿಫಲರಾಗಿದ್ದಾರೆ. ತುಳುನಾಡಿನ ಯುವ ಜನತೆ ಉದ್ಯೋಗಕ್ಕಾಗಿ ವಲಸೆ ಹೋಗುವ ಗಂಭೀರ ಪರಿಸ್ಥಿಯನ್ನು ರಾಜಕೀಯ ಪಕ್ಷಗಳು ತಂದ್ದೊಡಿವೆ. ತುಳುನಾಡಿನ ಜಾನಪದ ಕಲೆ, ಕ್ರೀಡೆ, ಸಾಹಿತ್ಯಗಳನ್ನು ಕಡೆಗಣಿಸಿವೆ. ತುಳುನಾಡಿನಲ್ಲಿ ಯಾವುದೇ ಕೃಷಿಯಾಧಾರಿತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ವತಂತ್ರ ತುಳುನಾಡ್ ಪಕ್ಷ ಅನಿವಾರ್ಯ: ತುಳುನಾಡಿನ ನೆಲ ಜಲದ ಉಳಿವಿಗಾಗಿ, ಭಾಷೆಯ ಸ್ಥಾನಮಾನಕ್ಕಾಗಿ, ತುಳುವರ ಭವ್ಯ ಭವಿಷ್ಯಕ್ಕಾಗಿ, ನಾಡಿನ ಸಮಗ್ರ ಅಭಿವೃದ್ಧಿಗಾಗಿ, ಸಮೃದ್ಧ ಪರಿಸರದ ಸಂರಕ್ಷಣೆಗಾಗಿ, ಮೂಲ ಸಂಸ್ಕೃತಿಯ ಪುನರುತ್ಥಾನಕ್ಕಾಗಿ, ಗತ ಇತಿಹಾಸದ ಸಂಶೋಧನೆಗಾಗಿ,ಇಲ್ಲಿನ ಶ್ರೀಮಂತ ಜಾನಪದ ಕಲೆ ಸಾಹಿತ್ಯ ಕ್ರೀಡೆಯ ಜಗದಗಲ ಪ್ರಸರಣಕ್ಕಾಗಿ, ಶಾಂತಿ ನೆಮ್ಮದಿ ಸಮೃದ್ಧ ಸೌರ್ಹಾದ ತುಳುನಾಡ್ ರಾಜ್ಯ ರಚನೆಗಾಗಿ ಸ್ವತಂತ್ರ ತುಳುನಾಡ್ ಪಕ್ಷ ರಚನೆ ಅನಿವಾರ್ಯವಾಗಿದೆ ಎಂದು  ಶೈಲೇಶ್ ಆರ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News