ಉಡುಪಿ: ನ್ಯಾಯಾಲಯದಲ್ಲೇ ವಿಶೇಷ ಪಿಪಿ ಮೇಲೆ ಶೂ ಎಸೆದ ಅಪರಾಧಿ !
ಉಡುಪಿ, ಎ.13: ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯವು 20 ವರ್ಷ ಜೈಲುಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಎ.12ರಂದು ತೀರ್ಪು ನೀಡಿದ್ದು, ಈ ವೇಳೆ ಆರೋಪಿಯು ಅಭಿಯೋಜನ ಪರ ವಾದಿಸಿದ್ದ ವಿಶೇಷ ಸರಕಾರಿ ಅಭಿಯೋಜಕರ ಮೇಲೆ ತನ್ನ ಶೂಗಳನ್ನು ಎಸೆದ ಬಗ್ಗೆ ವರದಿಯಾಗಿದೆ.
ಬ್ರಹ್ಮಾವರ ಸಮೀಪದ ಆರೂರು ಗ್ರಾಮದ ಕೀರ್ತಿ ನಗರದ ಪ್ರಶಾಂತ ಕುಲಾಲ್ ಯಾನೆ ಪಚ್ಚು ಯಾನೆ ಮಣಿ (32) ಶಿಕ್ಷೆಗೆ ಗುರಿಯಾದ ಅಪರಾಧಿ.
ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರ ಫೆ.17ರಂದು ರಾತ್ರಿ 7:30ರ ಸುಮಾರಿಗೆ 15 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಮನೆ ಸಮೀಪದ ಬೊಬ್ಬರ್ಯ ದೇವಸ್ಥಾನದ ಪೂಜೆಗೆ ಹೂ ಹಣ್ಣು ಖರೀದಿಸಲು ಮನೆಯಿಂದ ಕೋಟೇಶ್ವರ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದಳು. ಅಲ್ಲಿಗೆ ಬಂದ ಆಕೆಯ ಪರಿಚಯದ ಪ್ರಶಾಂತ್ ಕುಲಾಲ್ ಅಂಗಡಿಗೆ ನಾನು ಕರೆದುಕೊಂಡು ಹೋಗಿ ವಾಪಾಸು ಬಿಡುತ್ತೇನೆ ಎಂದು ಹೇಳಿ ಒತ್ತಾಯದಿಂದ ಆಕೆಯನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡನು. ಬಳಿಕ ಆತ ಅಲ್ಲಿಂದ ಕೋಟೇಶ್ವರಕ್ಕೆ ಕರೆದುಕೊಂಡು ಹೋಗದೆ ತನ್ನ ಮನೆಗೆ ಹೋದನು. ಅಲ್ಲಿ ಆತನ ತಾಯಿ ವಿರೋಧಿಸಿದ್ದಕ್ಕಾಗಿ ಬಾಲಕಿಯನ್ನು ಪೆರ್ಡೂರಿನ ಪಾಡಿಗಾರ ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆದು ಕೊಂಡು ಹೋದನು. ಮರುದಿನ ಫೆ.18ರಂದು ಬೆಳಗ್ಗೆ 11:30ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ರಶಾಂತ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ಐಪಿಸಿ ಕಲಂ 363, 366, 376 ಮತ್ತು ಕಲಂ 4 ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನ್ಯಾಯಾಲಯಕ್ಕೆ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ 19 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಆರೋಪಿಗೆ ಕಲಂ 363ರ ಪ್ರಕಾರ 3 ವರ್ಷ ಶಿಕ್ಷೆ, 376ರ ಪ್ರಕಾರ 10ವರ್ಷ ಮತ್ತು ಕಲಂ 4 ಪೋಕ್ಸೊ ಕಾಯಿದೆ ಪ್ರಕಾರ 7 ವರ್ಷ ಜೈಲು ಶಿಕ್ಷೆ ಮತ್ತು 25ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
ತೀರ್ಪು ಪ್ರಕಟಿಸುತ್ತಿದ್ದಂತೆ ಶೂ ಎಸೆದ !
ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಮೊದಲು ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ, ಪ್ರಕರಣದ ಆರೋಪಿ ವಿರುದ್ಧ ಕೊಲೆ ಸೇರಿದಂತೆ ಇತರ ಹಲವು ಪ್ರಕರಣಗಳಿರುವುದರಿಂದ ಆತನಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕು ಎಂದು ಅಭಿಯೋಜನ ಪರ ವಾದಿಸಿದರು. ಅದರಂತೆ ನ್ಯಾಯಾಧೀಶರು ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಇದರಿಂದ ಕುಪಿತಗೊಂಡ ಆರೋಪಿ ಪ್ರಶಾಂತ್ ಕುಲಾಲ್, ತಾನು ನಿಂತಿದ್ದ ಕಟಕಟೆಯಿಂದಲೇ ತನ್ನ ಕಾಲಿನಲ್ಲಿದ್ದ ಎರಡೂ ಶೂಗಳನ್ನು ಕಳಚಿ ನ್ಯಾಯಾಧೀಶರ ಮುಂದೆ ನಿಂತಿದ್ದ ವಿಜಯ ವಾಸು ಪೂಜಾರಿಯ ಮೇಲೆ ಎಸೆದು ಬೆದರಿಕೆಯೊಡ್ಡಿದನು. ಆದರೆ ವಿಜಯ ವಾಸು ಪೂಜಾರಿ ತನ್ನ ಮೇಲೆ ಎಸೆದ ಶೂಗಳಿಂದ ತಪ್ಪಿಸಿಕೊಂಡರೆನ್ನಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿಜಯ ವಾಸು ಪೂಜಾರಿ ನ್ಯಾಯಾಧೀಶರಿಗೆ ಮನವಿ ಮಾಡಿದರು. ಅದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು, ವಿಶೇಷ ಸರಕಾರಿ ಅಭಿಯೋಜಕರಿಗೆ ಭದ್ರತೆ ಒದಗಿಸುವಂತೆ ಜಿಲ್ಲಾ ಎಸ್ಪಿಯವರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಸಂತೆಕಟ್ಟೆಯ ನಿವಾಸಿಯಾಗಿರುವ ವಿಜಯ ವಾಸು ಪೂಜಾರಿ (35) ನೀಡಿದ ದೂರಿನಂತೆ ಪ್ರಶಾಂತ್ ಕುಲಾಲ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದೇ ರೀತಿ 2016 ಜು.11ರಂದು ವಿಜಯ ವಾಸು ಪೂಜಾರಿ ಅವರ ಕಚೇರಿಯ ನಾಮಫಲಕಗಳನ್ನು ದುಷ್ಕರ್ಮಿಗಳು ಹಾನಿ ಎಸಗಿದ್ದರು. ಅದರ ನಂತರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಗಾಯಗೊಂಡು ವಿಜಯ ಪೂಜಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಸ್ನೇಹಿತನನ್ನೇ ಕೊಲೆ ಮಾಡಿದ್ದ !
ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಶಾಂತ್ ಕುಲಾಲ್ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು. ನಂತರ 2017ರ ಮಾ.1ರಂದು ಪೇತ್ರಿಯ ಚೇರ್ಕಾಡಿ ಎಂಬಲ್ಲಿ ಕುಡಿಯಲು ಹಣ ನೀಡದ ತನ್ನ ಸ್ನೇಹಿತ ಚೇರ್ಕಾಡಿ ಗ್ರಾಮದ ಕನ್ನಾರು ನಿವಾಸಿ ಪ್ರಕಾಶ ನಾಯ್ಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಈತನಿಗೆ ಈವರೆಗೆ ಜಾಮೀನು ಸಿಕ್ಕಿರಲಿಲ್ಲ. ಅದೇ ರೀತಿ ಈತನ ವಿರುದ್ಧ ಬ್ರಹ್ಮಾವರ ಹಾಗೂ ಕುಂದಾಪುರ ಪೊಲೀಸ್ ಠಾಣೆಯಲ್ಲೂ ಇತರ ಪ್ರಕರಣಗಳು ದಾಖಲಾಗಿವೆ.
ಪರಿಶೀಲಿಸಿ ಕ್ರಮ: ಎಸ್ಪಿ
ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿಗೆ ಶೂ ಎಸೆದು ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಭದ್ರತೆ ಒದಗಿಸಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಉಡುಪಿ ವೃತ್ತ ನಿರೀಕ್ಷಕರು ತನಿಖೆ ನಡೆಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.