×
Ad

ಕಲಾವಿದರನ್ನು ಗುರುತಿಸುವುದರಿಂದ ಕಲೆ ಬೆಳೆಯಲು ಸಾಧ್ಯ: ಮುದ್ರಾಡಿ

Update: 2018-04-14 22:47 IST

ಉಡುಪಿ, ಎ.14: ಕಲಾವಿದರನ್ನು ಗುರುತಿಸುವ ಕಣ್ಣು ಮತ್ತು ಗೌರವಿಸುವ ಹೃದಯ ಇದ್ದರೆ ಕಲೆ ಬೆಳೆಯಲು ಸಾಧ್ಯವಾಗುತ್ತದೆ. ಕಲಾವಿದರನ್ನು ಗೌರವಿಸಿ ದರೆ, ಕಲೆಯನ್ನು ಗೌರವಿಸಿದಂತೆ ಎಂದು ಹಿರಿಯ ಸಾಹಿತಿ, ಅರ್ಥಧಾರಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ವತಿಯಿಂದ ಶನಿವಾರ ಅಂಬಲಪಾಡಿ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನ ದಲ್ಲಿ ನಡೆದ ಆರು ದಿನಗಳ ಅರ್ವತ್ತರ ಅರ್ಪಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಶುಭಾಶಂಸನೆಗೈದರು.
ಪ್ರತಿಯೊಬ್ಬರ ಜೀವನಕ್ಕೊಂದು ವೃತ್ತಿ, ಆನಂದಕ್ಕೊಂದು ಪ್ರವೃತ್ತಿ ಅಗತ್ಯ. ಅಂತಹ ಆನಂದ ಕಲೆಯಿಂದ ಮಾತ್ರ ಸಿಗುತ್ತದೆ. ಯಕ್ಷಗಾನ ಬೆಳಕು ಮತ್ತು ಬದುಕು ನೀಡುವ ಕಲೆಯಾಗಿದೆ. ಇದು ನಮಗೆ ಆರಾಧನಾ ಮಾಧ್ಯಮ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಈ ಸಂದರ್ಭದಲ್ಲಿ ನೂರರ ಹರೆಯದ ಹಿರಿಯ ಮದ್ದಲೆವಾದಕ ಗುರು ಹಿರಿಯಡಕ ಗೋಪಾಲ ರಾವ್ ಅವರನ್ನು ಸನ್ಮಾನಿಸಲಾಯಿತು. ಹವ್ಯಾಸಿ ಕಲಾವಿದ ಗುಳ್ಮೆ ನಾರಾಯಣ ಪ್ರಭು ಅವರನ್ನು ಪುರಸ್ಕರಿಸಲಾಯಿತು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವ ರಾಮ ಶೆಟ್ಟಿ, ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಕೆ.ಉದಯ ಕುಮಾರ್ ಶೆಟ್ಟಿ, ಡಾ. ನವೀನ್ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು. ರಾಘವೇಂದ್ರ ಉಪಾಧ್ಯಾಯ, ಗೋಪಾಲಕೃಷ್ಣ ಭಟ್, ತಮ್ಮಯ್ಯ ಶೇರಿಗಾರ್ ಉಪಸ್ಥಿತರಿದ್ದರು.

ಕಲಾ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News