×
Ad

ಕುಣಿಯೋಣು ಬಾರಾ ಮಕ್ಕಳ ರಂಗತರಬೇತಿ ಶಿಬಿರ ಉದ್ಘಾಟನೆ

Update: 2018-04-15 16:48 IST

ಉಡುಪಿ, ಎ.15: ಪೋಷಕರು ತಮ್ಮಲ್ಲಿ ಆಗದಿರುವ ಕನಸುಗಳ ಹೊರೆ ಯನ್ನು ಇಂದು ತಮ್ಮ ಮಕ್ಕಳಿಗೆ ದಾಟಿಸುತ್ತಿದ್ದಾರೆ. ಆದುದರಿಂದ ಮಕ್ಕಳು ದೊಡ್ಡ ವರ ಕನಸುಗಳನ್ನು ಹೊರುವ ಹೇಸರಗತ್ತೆಗಳಾಗುತ್ತಿದ್ದಾರೆ ಎಂದು ಸಮುದಾಯ ಕುಂದಾಪುರ ಅಧ್ಯಕ್ಷ ಉದ ಗಾಂವ್ಕಾರ್ ಹೇಳಿದ್ದಾರೆ.

ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆ ಮತ್ತು ಪಟ್ಲ ಭೂಮಿ ಗೀತ ಸಾಂಸ್ಕೃತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಶಾಂತಿನಿಕೇತನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕುಣಿಯೋಣು ಬಾರಾ ಮಕ್ಕಳ ರಂಗತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹೆತ್ತವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿಲ್ಲ. ಹಾಗೆ ನೆನಪು ಮಾಡಿ ಕೊಂಡರೆ ಮಕ್ಕಳ ಕನಸುಗಳನ್ನು ನಾವು ನಿರ್ಧಾರ ಮಾಡುವ ಕೆಲಸ ಮಾಡುತ್ತಿ ರಲಿಲ್ಲ. ಮಕ್ಕಳನ್ನು ನಾವು ಸೀಮಿತ ಚೌಕಟ್ಟಿನೊಳಗೆ ಬೆಳೆಸುತ್ತಿದ್ದೇವೆ. ಮಕ್ಕಳ ರಂಗತರಬೇತಿ ಶಿಬಿರಗಳು ನಮ್ಮ ಸುತ್ತಲಿರುವ ಚೌಕಟ್ಟನ್ನು ಮೀರಿ ಯೋಚಿ ಸಲು, ಕಲ್ಪನೆಗಳ ಸೀಮೋಲ್ಲಂಘನ ಮಾಡಲು ಸಾಧ್ಯವಾಗಿಸುತ್ತದೆ. ಜೀವನದಲ್ಲಿ ತುಂಬಾ ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳ ಮೂಲಕ ಅದ್ಭುತವಾದುದ್ದನ್ನು ಸಾಧಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ರಂಗಭೂಮಿ ಮತ್ತು ಕಿರುತೆರೆ ನಟ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ, ನಾಟಕಗಳ ಮೂಲಕ ಕನಸುಗಳನ್ನು ಕಟ್ಟಬಹುದು. ಇದರಿಂದ ನಮ್ಮ ಭಾವನೆಗಳು ಧನಾತ್ಮಕವಾಗುತ್ತವೆ. ಆ ಮೂಲಕ ಮಾನವೀಯ ಸಂಬಂಧ ಮತ್ತು ನೆಮ್ಮದಿಯ ಬದುಕನ್ನು ನಾಟಕ ಕಟ್ಟಿಕೊಡುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ವಹಿಸಿದ್ದರು. ಪ್ರಾಂಶುಪಾಲೆ ರೂಪಾ ಡಿ.ಕಿಣಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸುಧೀರ್ ಕುಮಾರ್ ಪಟ್ಲ ಸ್ವಾಗತಿಸಿದರು. ಶಾಲಾ ಶಿಕ್ಷಕಿ ನೇತ್ರಾವತಿ ವಂದಿಸಿದರು. ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News