ಪದಕಗಳಿಕೆಯಲ್ಲಿ ಮಹಾರಾಷ್ಟ್ರದ ಕ್ರೀಡಾಪಟುಗಳು ಅಗ್ರಸ್ಥಾನ, ಕರ್ನಾಟಕ ದ್ವಿತೀಯ
ಮಂಗಳೂರು, ಎ.15: ಕಳೆದ ನಾಲ್ಕು ದಿನಗಳಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಇಂಡಿಯನ್ ಮಾಸ್ಟ್ರರ್ಸ್ ಎಸೋಶಿಯೇಶನ್ಸ್ ,ಕರ್ನಾಟಕ ರಾಜ್ಯ ಮತ್ತು ದ.ಕ ಜಿಲ್ಲಾ ಮಟ್ಟದ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡ 38ನೆ ರಾಷ್ಟ್ರೀಯ ಹಿರಿಯ ನಾಗರಿಕರ ಕ್ರೀಡಾಕೂಟ ಇಂದು ಸಂಜೆ ಸಮಾರೋಪ ಗೊಂಡಿತು.
ವಿಜೇತರು ಆಗಸ್ಟ್ 18 ಮತ್ತು 19ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಖಂಡದ ವ್ಯಾಪ್ತಿಯ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ ಎಂದು ಕ್ರೀಡಾ ಕೂಟದ ಸಂಘಟಕರು ತಿಳಿಸಿದ್ದಾರೆ.
ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ ದೇಶದ 18 ರಾಜ್ಯಗಳ ಹಾಗೂ ಅತಿಥಿ ರಾಷ್ಟ್ರ ಶ್ರೀಲಂಕಾದ 47 ಕ್ರೀಡಾ ಪಟುಗಳು ಸೇರಿ 1600 ಕ್ರೀಡಾ ಪಟುಗಳು 357ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ನಾಲ್ಕನೆ ದಿನವೂ ಮಹಾರಾಷ್ಟ್ರದ ಕ್ರೀಡಾ ಪಟುಗಳು ಪದಕಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದು ಒಟ್ಟು ಪದಕಗಳಿಕೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ, ಕೇರಳ ಹಾಗೂ ಗುಜರಾತ್ ಪ್ರದೇಶದ ಕ್ರೀಡಾಪಟುಗಳು ಪದಕಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ.
ಸಮಾರೋಪ:- ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪತ್ರ ವಿತರಿಸಿದರು.
ಐಎಂಎ ಅಧ್ಯಕ್ಷ ಅಮರೇಂದ್ರ ರೆಡ್ಡಿ, ಉಪಾಧ್ಯಕ್ಷ ಧರ್ಮಪಾಲ ಶರ್ಮ ಜಿಲ್ಲಾ ಮಾಸ್ಟರ್ಸ್ ಎಸೋಶಿಯೇಶನ್ಸ್ ಅಧ್ಯಕ್ಷ ಕೆ.ಎಸ್.ಕೋದಂಡ ರಾಮೇಗೌಡ, ಐಎಂಎ ಮಹಾ ಪ್ರಧಾನ ಕಾರ್ಯದರ್ಶಿ ಜೆರಾಲ್ಡ್ ಡಿ ಸೋಜ, ಶ್ರೀಲಂಕಾದ ತಂಡದ ವ್ಯವಸ್ಥಾಪಕ ಸುಂದರ್ ರಾಜನ್, ಸಂಘಟನಾ ಸಮಿತಿಯ ಅಧ್ಯಕ್ಷ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯ ದಿನವು ಮಹಾರಾಷ್ಟ್ರ ಅಗ್ರಸ್ಥಾನದಲ್ಲಿ:- ಕೊನೆಯ ದಿನವಾದ ರವಿವಾರ ನಡೆದ 64 ವಿವಿಧ ಸ್ಪರ್ಧೆಗಳಲ್ಲಿ ಮಹಾರಾಷ್ಟ್ರದ ಕ್ರೀಡಾ ಪಟುಗಳು ಗರಿಷ್ಠ ಸಂಖ್ಯೆಯ ಪದಕಗಳನ್ನು ಪಡೆದು ಕ್ರೀಡಾಕೂಟದಲ್ಲಿ ಅಗ್ರ ಸ್ಥಾನವನ್ನು ಪಡೆದರು.
ನಾಲ್ಕನೆ ದಿನ ವಿವಿಧ ಸ್ಪರ್ಧೆಗಳಲ್ಲಿ ಪದಕ ವಿಜೇತರು:- 55ರ ಮೇಲಿನ ಮಹಿಳೆಯರ ಟ್ರಿಫಲ್ ಜಂಪ್ ವಿಭಾಗದಲ್ಲಿ ಮಹಾರಾಷ್ಟ್ರದ ಒಂದೇ ರಾಜ್ಯದವರಾದ ಸುಶ್ಮಾ,ಕಾಂತಿರಾವ್, ಚಿತ್ರಾನಲ್‌ಬಾಡಿ ಚಿನ್ನ ಬೆಳ್ಳಿ ಕಂಚಿನ ಪದಕ ಗಳಿಸಿದರು.
55ರ ಮೇಲಿನ ಪುರುಷರ 10000ಮೀಟರ್ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಪಾಂಡುರಂಗ ಪಾಟೀಲ್ ಚಿನ್ನ, ಕರ್ನಾಟಕದ ಚಂದ್ರಶೇಖರ್ ಬೆಳ್ಳಿ ಹಾಗೂ ಕರ್ನಾಟಕದ ಅಣ್ಣಪ್ಪ ಕಂಚಿನ ಪದಕ ಗಳಿಸಿದ್ದಾರೆ. 60ವರ್ಷ ಮೇಲಿನ ಪುರುಷರ 10000 ಮೀಟರ್ ಒಟದ ಸ್ಪರ್ಧೆಯಲ್ಲಿ ಕರ್ನಾಟಕದ (ಮಂಗಳೂರಿನ ಸರಿಪಲ್ಲದವರು) ಮಾಧವ ಸರಿಪಲ್ಲ ಚಿನ್ನ, ಮಹಾರಾಷ್ಟ್ರದ ಹರಿಶ್ಚಂದ್ರ ತೋರಾಟ್ ಬೆಳ್ಳಿ ಹಾಗೂ ಕರ್ನಾಟಕದ ಲಕ್ಷ್ಮಣ್ ರಾವ್ ಕಂಚು ಪಡೆದಿದ್ದಾರೆ.
60 ವರ್ಷದ ಮೇಲಿನ ಮಹಿಳೆಯರ ಜ್ಯಾವೆಲಿನ್ ತ್ರೋ ವಿಭಾಗದಲ್ಲಿ ಕರ್ನಾಟಕದ ಕಾಂಚನ ನಾಯಕ್ ಚಿನ್ನ,ಮಹಾರಾಷ್ಟ್ರದ ಚೆಮೆಲಿನಾ ಪ್ರಾನ್ಸಿಸ್ ಬೆಳ್ಳಿ, ಮಹಾರಾಷ್ಟ್ರದ ಮಿತ್ರಾ ಕತ್ವಾರ ಕಂಚಿನ ಪದಕಗಳಿಸಿದ್ದಾರೆ. 65ರ ಮೇಲಿನ ಮಹಿಳೆಯರ ಜ್ಯಾವೆಲಿನ್ ತ್ರೋ ವಿಭಾಗದಲ್ಲಿ ಗುಜರಾತಿನ ಸವಿತಾ ಬೆನ್ ಮನ್ವಾರ ಚಿನ್ನ, ಕರ್ನಾಟಕದ ನಾಗರತ್ನಮ್ಮ ಬೆಳ್ಳಿ, ಗುಜರಾತಿನ ಉಷಾ ಬೆನ್ ಎ.ಗೋಸ್ವಾಮಿ ಕಂಚಿನ ಪದಕಗಳಿಸಿದ್ದಾರೆ.
30 ವರ್ಷದ ಮೇಲಿನ ಪುರುಷರ ಪೋಲ್‌ವಾಲ್ಟ್ ವಿಭಾಗದಲ್ಲಿ ಆಂಧ್ರದ ಡಿ ಗೋಪಿ ಚಿನ್ನ, ಮಹಾರಾಷ್ಟ್ರದ ವಿಷ್ಣು ಪ್ರಸಾದ್ ಬೆಳ್ಳಿ ಹಾಗೂ ಕರ್ನಾಟಕದ ಶರವಣ ಕಂಚಿನ ಪದಕ ಗಳಿಸಿದ್ದಾರೆ. 45ವರ್ಷದ ಮೇಲಿನ ಪುರುಷರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ಮಹಾರಾಷ್ಟ್ರದ ಕ್ರೀಡಾಪಟುಗಳಾದ ಅಮರಶೀಲ ಪವಾರ್ ಚಿನ್ನ,ರಾಮ್ ಜಗದೇ ಬೆಳ್ಳಿ , ಜೋರ್ಜ್ ಕಂಚು ಪಡೆದಿದ್ದಾರೆ.
50 ವರ್ಷದ ಮೇಲಿನ ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕದ ವಿಜಯ ಕುಮಾರಿ ಚಿನ್ನ, ಶ್ರೀಲಂಕಾದ ಡಿಎಸ್‌ಎಸ್ ಪ್ರೀದರ್ಶಿನಿ ಬೆಳ್ಳಿ, ಮಹಾರಾಷ್ಟ್ರದ ಪುರ್ಣಿಮಾ ರಾಣಿ ಕಂಚಿನ ಪದಕಗಳಿಸಿದ್ದಾರೆ.
30 ವರ್ಷದ ಮೇಲಿನ ಪುರುಷರ ಹ್ಯಾಮರ್ ತ್ರೋ ವಿಭಾಗ ದಲ್ಲಿ ಕೇರಳದ ಜಾಕೋಬ್ ಥೋಮಸ್ ಚಿನ್ನ, ಹರ್ಯಾಣದ ವಿನೋದ್ ಕುಮಾರ್ ಬೆಳ್ಳಿ ಹಾಗೂ ತಮಿಳು ನಾಡಿನ ವರುವೇಶನ್ ಕಂಚಿನ ಪದಕ ಗಳಿಸಿದ್ದಾರೆ. 50ವರ್ಷದ ಮೇಲಿನ ಮಹಿಳೆಯರ ಜ್ಯಾವೆಲಿನ್ ಎಸೆತದಲ್ಲಿ ಶ್ರೀಲಂಕಾದ ಡಿಎಸ್‌ಎಸ್ ಪ್ರೀಯದರ್ಶಿನಿ ಚಿನ್ನ,ಕರ್ನಾಟಕದ ಪದ್ಮಾವತಿ ಬೆಳ್ಳಿ, ಶ್ರೀಲಂಕಾದ ಪದ್ಮ ಶೀಲೆ ಕಂಚು ಗಳಿಸಿದ್ದಾರೆ. 35 ವರ್ಷದ ಮೇಲಿನ ಪುರುಷರ ಹ್ಯಾಮರ್ ತ್ರೋ ವಿಭಾಗದಲ್ಲಿ ಹರ್ಯಾಣದ ಪ್ರವಿಣ್ ಕುಮಾರ್ ಚಿನ್ನ,ಮಹಾರಾಷ್ಟ್ರದ ಸಂಜಯ್ ಕುಮಾರ್ ಬೆಳ್ಳಿ, ಮಹಾರಾಷ್ಟ್ರದ ಭೀಮ್ ಸಿಂಗ್ ಶೇಖಾವತ್ ಕಂಚಿನ ಪದದಕಗಳಿಸಿದ್ದಾರೆ.