×
Ad

ಪುತ್ತೂರು: ಚುನಾವಣಾ ನೀತಿ ಸಂಹಿತೆ; ಬ್ಯಾನರ್ ಬಂಟಿಂಗ್ಸ್ ತೆರವು

Update: 2018-04-15 22:11 IST

ಪುತ್ತೂರು, ಎ.15: ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಿಂದಾಗಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭ  ಏಳ್ಮುಡಿಯಿಂದ ಕಲ್ಲಾರೆ ರಾಘವೇಂದ್ರ ಮಠದವರೆಗಿನ ರಸ್ತೆಯಲ್ಲಿ ಅಳವಡಿಸಲಾಗಿದ್ದ ಕೇಸರಿ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ನಗರಸಭೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಮಾಣಿಕ್ಯೋತ್ಸವದ ಅಂಗವಾಗಿ ಅಧಿಕಾರಿಗಳ ಅನುಮತಿ ಪಡೆದು ರಸ್ತೆ ಬದಿಯಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿತ್ತು. ಮಾಣಿಕ್ಯೋತ್ಸವ ಮುಗಿದರೂ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಕಲ್ಲಾರೆಯಲ್ಲಿ ದೇವರ ಕಟ್ಟೆ ಪೂಜೆ ನಡೆಯಲಿರುವುದರಿಂದ ತೆರವುಗೊಳಿಸದೆ ಹಾಗೇ ಉಳಿಸಿಕೊಳ್ಳಲಾಗಿತ್ತು. ಆದರೆ ನಗರಸಭೆಯಿಂದ ಅಳವಡಿಸಲು ಪಡೆದುಕೊಂಡಿರುವ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಹಾಗೂ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಶನಿವಾರ ನಗರಸಭೆಯ ಅಧಿಕಾರಿಗಳು ಕಲ್ಲಾರೆಯಲ್ಲಿ ಅಳವಡಿಸಲಾಗಿದ್ದ ಎಲ್ಲಾ ಬ್ಯಾನರ್ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿದ್ದಾರೆ.

ಇತ್ತೀಚೆಗೆ ನಗರಸಭೆ ಹಾಗೂ ಪುತ್ತೂರು ಉಪವಿಭಾಗೀಯ ಅಧಿಕಾರಿಗಳ ಕಚೇರಿಯಿಂದ ಕಲ್ಲಾರೆ ರಾಘವೇಂದ್ರ ಮಠ ಕಾರ್ಯಕ್ರಮ ಹಾಗೂ ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾ ವಿಶೇಷ ಪೇಟೆ ಸವಾರಿಗಾಗಿ ಪತಾಕೆ ಹಾಗೂ ಬಂಟಿಂಗ್ಸ್‌ನ್ನು ಅಳವಡಿಸಲು ರೂ. 3165 ಪಾವತಿಸಿ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಚುನಾವಣಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ ಅವರು ಬ್ಯಾನರ್ ಹಾಗೂ ಬಂಟಿಂಗ್ಸ್ ಅಳವಡಿಸಲು ಎ.5ರಿಂದ ಎ.18ರವರೆಗೆ ಷರತ್ತುಬದ್ದ ವಿಶೇಷ ಅನುಮತಿ ನೀಡಿದ್ದರು. ಆದರೆ ಎ.14ರಂದು ನಗರಸಭಾ ಅಧಿಕಾರಿ ವರ್ಗದವರು ಏಕಾಏಕಿ ಎಲ್ಲವನ್ನೂ ತೆರವುಗೊಳಿಸಿದ್ದಾರೆ ಎಂದು ಸ್ಥಳೀಯ ಓಂಕಾರ ಯುವಕ ವೃಂದದ ಅಧ್ಯಕ್ಷ ಮನೋಹರ್ ಕಲ್ಲಾರೆ ಆರೋಪಿಸಿದ್ದಾರೆ.

ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ
ಹಿಂದೂಗಳ ಧಾರ್ಮಿಕ ಭಾವನೆಗೆಗೆ ಧಕ್ಕೆ ತರುವಂತೆ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಹಿಂದೂ ಮಖಂಡರು ಹಾಗೂ ಓಂಕಾರ ಯುವಕ ವೃಂದದ ಸದಸ್ಯರು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನುಮತಿ ಪಡೆದು ಅಳವಡಿಸಲಾಗಿರುವ ಪತಾಕೆ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಅಧ್ಯಕ್ಷರ ಒತ್ತಡಕ್ಕೆ ಮನಿದು ತೆರವುಗೊಳಿಸಿದರುವ ಸಾಧ್ಯತೆಯಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಎಲ್ಲರಿಗೂ ಸದ್ಬುದ್ದಿ ನೀಡಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಓಂಕಾರ ಯುವಕ ವೃಂದದ ಅಧ್ಯಕ್ಷ ಮನೋಹರ್ ಕಲ್ಲಾರೆ ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನೀತಿ ಸಂಹಿತೆ ಹೊರತುಪಡಿಸಿ ಬೇರೆ ಯಾವ ಕಾರಣವೂ ಇಲ್ಲ. ಜಾತ್ರೋತ್ಸವದಲ್ಲಿ ರಸ್ತೆಗೆ ಅಡ್ಡಲಾಗಿ ಬಂಟಿಂಗ್ಸ್ ಅಳವಡಿಸಲು ನಾವು ಯಾರಿಗೂ ಅನುಮತಿ ನೀಡಿಲ್ಲ. ಅಲ್ಲದೆ ದೇವರ ಪೇಟೆ ಸವಾರಿಯಂದು ಮಾತ್ರ ಅಳವಡಿಸಿ ಮಾರನೇ ದಿನವೇ ತೆರವುಗೊಳಿಸುವಂತೆ ಅನುಮತಿ ಕೇಳಿದವರಿಗೆ ಸ್ಪಷ್ಟ ಪಡಿಸಿದ್ದೇವೆ. ದೇವರ ಸವಾರಿ ಮುಗಿದ ಮಾರನೇ ದಿನ ಎಲ್ಲೆಡೆ ತೆರವು ಮಾಡಿದ್ದೇವೆ. ಅಲ್ಲದೆ ಕಲ್ಲಾರೆಯಲ್ಲಿ ಜಾತ್ರೋತ್ಸವಕ್ಕೆ ಬ್ಯಾನರ್ ಮತ್ತು ಬಂಟಿಂಗ್ಸ್ ಅಳವಡಿಸಲು ನಮ್ಮಲ್ಲಿ ಅನುಮತಿಯನ್ನು ಪಡೆಯಲಾಗಿಲ್ಲ.
- ರೂಪ ಶೆಟ್ಟಿ, ಪೌರಾಯುಕ್ತರು, ಪುತ್ತೂರು ನಗರಸಭೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News