ನಿರ್ಭಯಾಳನ್ನೂ ನಡುಗಿಸಿದ ಆಸಿಫಾ ಪ್ರಕರಣ

Update: 2018-04-16 04:10 GMT

ನರೇಂದ್ರ ಮೋದಿ ಅಧಿಕಾರಕ್ಕೇರುತ್ತಿದ್ದಂತೆಯೇ, ಭಾರತ ಇನ್ನೇನು ವಿಶ್ವ ಗುರುವಾಗಿ ಬಿಡುತ್ತದೆ ಎಂದು ಕೆಲ ಮಾಧ್ಯಮಗಳು ಬರೆದುಕೊಂಡಿದ್ದವು. ಅವರ ಬರಹಗಳು ನಿಜವಾಯಿತೇನೋ ಎಂಬಂತೆ, ಇಂದು ಭಾರತದಲ್ಲಿ ನಡೆಯುತ್ತಿರುವ ಘಟನೆಯ ಕುರಿತಂತೆ ವಿಶ್ವ ಮಾತಾಡಿಕೊಳ್ಳುತ್ತಿದೆ. ವಿದೇಶಿ ಪತ್ರಿಕೆಗಳು ಭಾರತದ ಬೆಳವಣಿಗೆಗಳ ಕುರಿತಂತೆ ಸಂಪಾದಕೀಯ ಬರೆಯುತ್ತಿವೆ. ಪ್ರಧಾನಪುಟದಲ್ಲಿ ಭಾರತದ ಸುದ್ದಿಗಳನ್ನು ಛಾಪಿಸುತ್ತಿವೆೆ. ದುರದೃಷ್ಟವಶಾತ್ ಅವೆಲ್ಲವೂ ಭಾರತವನ್ನು ವಿಶ್ವ ಮಟ್ಟದಲ್ಲಿ ಹೀನಾಯ ಸ್ಥಿತಿಗೆ ತಳ್ಳುತ್ತಿವೆ. ಸ್ವಾತಂತ್ರದ ಬಳಿಕದ ಭಾರತದ ಎಲ್ಲ ಸಾಧನೆಗಳಿಗೆ, ಹಿರಿಮೆಗಳಿಗೆ ಮಸಿ ಬಳಿಯುತ್ತಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಅವುಗಳಿಂದ ತೀವ್ರ ಧಕ್ಕೆಯಾಗುತ್ತಿವೆ. ಬಹುಶಃ ಯಾವುದೋ ಐಸಿಸ್‌ನಂತಹ ಉಗ್ರವಾದಿ ಗುಂಪುಗಳು ಎಸಗುತ್ತವೆ ಎಂದು ಈವರೆಗೆ ನಾವು ಮಾಧ್ಯಮಗಳಲ್ಲಿ ಓದಿದ್ದ ಬರ್ಬರ ಘಟನೆಯೊಂದು ಜಮ್ಮುವಿನ ಕಥುವಾದಲ್ಲಿ ಸಂಭವಿಸಿದೆ. 

ಆಸಿಫಾ ಎನ್ನುವ ಎಂಟು ವರ್ಷದ ಮಗುವನ್ನು ನಾಲ್ಕು ದಿನಗಳ ಕಾಲ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಅತ್ಯಾಚಾರಗೈದಿದ್ದಾರೆ. ಆಕೆಗೆ ಬರ್ಬರ ಚಿತ್ರಹಿಂಸೆಯನ್ನು ನೀಡಿ ಬಳಿಕ ಕೊಂದು ಹಾಕಿದ್ದಾರೆ. ನಿರ್ಭಯಾ ಪ್ರಕರಣದ ಬಳಿಕ ಭಾರತ ಮತ್ತೆ ಅತ್ಯಾಚಾರಗಳ ಕಾರಣಗಳಿಗಾಗಿ ವಿಶ್ವದಲ್ಲಿ ಸುದ್ದಿಯಾಗಿದೆ. ಈ ಬಾರಿಯ ಪ್ರಕರಣ ನಿರ್ಭಯಾ ಪ್ರಕರಣಕ್ಕಿಂತಲೂ ಭೀಕರವಾದುದು. ಭಿನ್ನವಾದುದು. ಸ್ವತಃ ನಿರ್ಭಯಾಳನ್ನೇ ನಡುಗಿಸುವಂತಹದು. ನಿರ್ಭಯಾ ಪ್ರಕರಣದಲ್ಲಿ ಮಹಿಳೆಯನ್ನು ಬರ್ಬರವಾಗಿ ಅತ್ಯಾಚಾರಗೈದು ಹತ್ಯೆಗೈದವರು ವಿಕೃತ ಕಾಮಾಂಧರಾಗಿದ್ದರು. ಅಲ್ಲಿ ನಿರ್ಭಯಾ ಎನ್ನುವ ತರುಣಿಯ ಬದಲಿಗೆ ಯಾವ ತರುಣಿಯಿದ್ದಿದ್ದರೂ ಆಕೆ ಅತ್ಯಾಚಾರಕ್ಕೊಳಗಾಗುತ್ತಿದ್ದಳು. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಗಳು ಅನಕ್ಷರಸ್ಥರು, ಪಾನಮತ್ತರು, ನಿರ್ಲಕ್ಷಿತ ಸಮುದಾಯಕ್ಕೆ ಸೇರಿದ ಕಾರ್ಮಿಕರಾಗಿದ್ದರು. ಅತ್ಯಾಚಾರ ನಡೆದಿರುವುದು ಚಲಿಸುವ ಬಸ್‌ನಲ್ಲಿ. ಒಂದು ಹೆಣ್ಣನ್ನು ಅತ್ಯಾಚಾರಗೈಯಲು ಅವರಲ್ಲಿ ತಮ್ಮಾಳಗಿನ ವಿಕೃತ ಕಾಮಾಂಧತೆಯನ್ನು ಹೊರತು ಪಡಿಸಿದ ಇನ್ನೊಂದು ಕಾರಣವಿರಲಿಲ್ಲ. ಆದರೆ ಆಸಿಫಾ ಪ್ರಕರಣ ಭಿನ್ನವಾದುದು. 

ಇಲ್ಲಿ ಆಕೆಯ ಪ್ರಾಯ ಬರೇ ಎಂಟು ವರ್ಷ. ಆಕೆಯನ್ನು ಅಪಹರಿಸಿದ್ದು, ಅವಳು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವಳು ಎನ್ನುವ ಕಾರಣಕ್ಕಾಗಿ. ಆಕೆಯನ್ನು ನಾಲ್ಕು ದಿನಗಳ ಕಾಲ ದೇವಸ್ಥಾನದೊಳಗೆ ಬಂಧಿಸಿಟ್ಟು ಅತ್ಯಾಚಾರ ಗೈದವರು ಬರೇ ಕಾಮಾಂಧರಾಗಿರಲಿಲ್ಲ. ಧರ್ಮಾಂಧರೂ ಆಗಿದ್ದರು. ಒಂದು ನಿರ್ದಿಷ್ಟ ಧರ್ಮದ ಜನರಿಗೆ ಪಾಠ ಕಲಿಸುವುದು ಅವರ ಉದ್ದೇಶವಾಗಿತ್ತು. ಈ ಭೀಕರ ಕೃತ್ಯದಲ್ಲಿ ಭಾಗವಹಿಸಿದವರಾದರೂ ಯಾರು? ಬರೇ ಯುವಕರಲ್ಲ. 60 ವರ್ಷ ದಾಟಿದ ವೃದ್ಧನೂ ಭಾಗಿಯಾಗಿದ್ದ. ಈತ ಸ್ಥಳೀಯ ನಿವೃತ್ತ ಕಂದಾಯ ಅಧಿಕಾರಿ ಬೇರೆ. ಜೊತೆಗೆ ಈತನ ಕುಟುಂಬವೂ ಈ ಅತ್ಯಾಚಾರದಲ್ಲಿ ಭಾಗವಹಿಸಿತ್ತು. ಇವೆಲ್ಲವು ನಡೆದಿರುವುದು ಪೊಲೀಸ್ ಅಧಿಕಾರಿಯೊಬ್ಬನ ನೇತೃತ್ವದಲ್ಲೇ ಆಗಿತ್ತು. ಇನ್ನೇನು ಸಾಯಬೇಕು ಎನ್ನುವ ಹೊತ್ತಿನಲ್ಲಿ ಪೊಲೀಸ್ ಅಧಿಕಾರಿ ‘ಕೊನೆಯ ಬಾರಿ’ ಎಂದು ಆಕೆಯ ಮೇಲೆರಗಿದ. ಶಿಲಾಯುಗದಲ್ಲೂ ಇಂತಹದೊಂದು ಭೀಕರತೆ ನಡೆದಿರಲು ಸಾಧ್ಯವಿಲ್ಲ. ಬಳಿಕ ಅದೇ ಪೊಲೀಸ್ ಅಧಿಕಾರಿ ಆಕೆಯನ್ನು ಕೊಂದು ಹಾಕಿದ.ಆಸಿಫಾಳ ಪ್ರಕರಣದಲ್ಲಿ ಇಡೀ ವ್ಯವಸ್ಥೆ ಭಾಗಿಯಾಗಿದೆ.

ಇಲ್ಲಿ ಕಾಮಾಂಧರಲ್ಲ, ಧರ್ಮಾಂಧರು ತಮ್ಮ ವಿಕೃತಿಯನ್ನು ಮೆರೆದಿದ್ದಾರೆ. ದೇವಸ್ಥಾನದಲ್ಲಿ ಈ ಕೃತ್ಯವನ್ನು ಎಸಗಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಘಟನೆ ನಡೆದ ಬಳಿಕವಾದರೂ ದೇಶ ಸಂತ್ರಸ್ತೆಯ ಪರವಾಗಿ ನಿಂತಿತು. ಪಕ್ಷ ಭೇದ ಮರೆತು ಹೋರಾಟಗಳು ನಡೆದವು. ಮೊಂಬತ್ತಿಗಳು ಹೆದ್ದಾರಿಗಳಲ್ಲಿ ರಾಶಿ ರಾಶಿಯಾಗಿ ಕರಗಿದವು. ಆರೋಪಿಗಳನ್ನು ಬಂಧಿಸುವಲ್ಲಿ ಸರಕಾರ ತಕ್ಷಣ ಸ್ಪಂದಿಸಿತು. ಇಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ಸರಕಾರಕ್ಕೆ ಸಮಸ್ಯೆಗಳೇ ಇರಲಿಲ್ಲ. ಯಾಕೆಂದರೆ ಆರೋಪಿಗಳು ಯಾವುದೇ ರಾಜಕೀಯ ಹಿನ್ನೆಲೆಗಳು ಇದ್ದವರು ಆಗಿರಲಿಲ್ಲ. ನಾಗರಿಕ ಸಮಾಜದಲ್ಲಿ ‘ನಿರ್ಲಕ್ಷಿಸಲ್ಪಟ್ಟ’ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ದುರದೃಷ್ಟವಶಾತ್ ಆಸಿಫಾಳ ಮೇಲೆ ಸತ್ತ ಬಳಿಕವೂ ಅತ್ಯಾಚಾರ ಮುಂದುವರಿಯಿತು. ಆಕೆಯ ಪ್ರಕರಣದ ತನಿಖೆಯೇ ಹಳ್ಳ ಹಿಡಿಯಿತು. 

ಪೊಲೀಸ್ ಅಧಿಕಾರಿಗಳು ತನಿಖೆಯ ದಾರಿಯನ್ನು ತಪ್ಪಿಸಿದರು. ಆಕೆಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ, ಬಲಿ ಕೊಡುವುದು ಕೊಲೆಗಾರರ ಉದ್ದೇಶ ಆಗಿರಬೇಕು ಎಂದೆಲ್ಲ ಪ್ರಕರಣವನ್ನು ತಿರುಚಲಾಯಿತು. ಇಡೀ ಪ್ರಕರಣ ಮರು ತನಿಖೆಯಾಗದೇ ಇದ್ದಿದ್ದರೆ ಸತ್ಯ ಹೊರ ಬರುತ್ತಲೇ ಇರಲಿಲ್ಲ. ಮರು ತನಿಖೆ, ಆ ಹೆಣ್ಣು ಮಗುವಿನ ಅತ್ಯಾಚಾರ, ಹತ್ಯೆಯ ಹಿಂದಿರುವ ಅಧಿಕಾರಿಗಳ ಹೆಸರನ್ನೆಲ್ಲ ಬಹಿರಂಗಪಡಿಸಿತು. ಯಾವ ಕಾನೂನು ಆ ಬಾಲಕಿಗೆ ನ್ಯಾಯವನ್ನು ನೀಡಬೇಕಿತ್ತೋ, ಆ ಕಾನೂನಿನ ಕಾವಲುಗಾರರೇ ಆರೋಪಿಗಳನ್ನು ರಕ್ಷಿಸಲು ಬೀದಿಗಿಳಿದರು. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಬಾರದು ಎಂದು ವಕೀಲರೇ ಬಹಿರಂಗ ಬೆದರಿಕೆ ಹಾಕಿದರು. ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದರು. ‘ಭಾರತ್ ಮಾತಾಕಿ ಜೈ’ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲ, ಹಿಂದೂ ಏಕ್ತಾ ಮಂಚ್ ಆರೋಪಿಗಳನ್ನು ರಕ್ಷಿಸಲು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಜಮ್ಮು ಕಾಶ್ಮೀರ ಸರಕಾರದ ಬಿಜೆಪಿಯ ಸಚಿವರೂ ಭಾಗವಹಿಸಿದರು. ಸರಕಾರವೇ ಈ ಅತ್ಯಾಚಾರ, ಕೊಲೆಯಲ್ಲಿ ಪರೋಕ್ಷವಾಗಿ ಭಾಗಿಯಾಯಿತು ಎಂದ ಮೇಲೆ, ಆ ಮುಗ್ಧ ಬಾಲಕಿಗೆ ನ್ಯಾಯ ಸಿಗುವುದಾದರೂ ಹೇಗೆ?

ಇದೀಗ ಅನ್ಯಾಯ ನಡೆದು ಮೂರು ತಿಂಗಳ ಬಳಿಕ ನಡೆದದ್ದೇನು ಎನ್ನುವುದು ಮಾಧ್ಯಮಗಳ ಮೂಲಕ ವಿಶ್ವಕ್ಕೆ ಗೊತ್ತಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣ ಸುದ್ದಿಯಾದ ಬಳಿಕ ದೇಶದ ಗೃಹ ಸಚಿವರು ಎರಡು ವಾಕ್ಯಗಳಲ್ಲಿ ಘಟನೆಯನ್ನು ಖಂಡಿಸಿದರು. ರಾಜಕೀಯ ಒತ್ತಡ ಹೇರಿದ ಕಾರಣಕ್ಕಾಗಿ ಸರಕಾರವನ್ನು ಉಳಿಸಿಕೊಳ್ಳುವ ಒಂದೇ ಒಂದು ಅಜೆಂಡಾವಾಗಿ ಬಿಜೆಪಿಯು ಆಸಿಫಾ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ ಇಬ್ಬರು ಸಚಿವರನ್ನು ಹೊರ ಹಾಕಿತು. ಆದರೆ ಆ ಸಚಿವರು ತಮ್ಮ ಕೃತ್ಯಕ್ಕೆ ಬಿಜೆಪಿಯನ್ನೇ ಹೊಣೆ ಮಾಡಿದ್ದಾರೆ. ‘‘ಬಿಜೆಪಿ ವರಿಷ್ಠರು ಸೂಚಿಸಿದ ಕಾರಣಕ್ಕೆ ನಾವು ಆ ಸಭೆಯಲ್ಲಿ ಭಾಗವಸಿದ್ದೆವು’’ ಎಂದು ಹೇಳಿಕೆ ಕೊಟ್ಟಿದ್ದಾರೆ. ನೀರು ಮೂಗಿನವರೆಗೆ ಬಂದಿರುವುದು ಗೊತ್ತಾದ ಬಳಿಕ ಅನಿವಾರ್ಯವಾಗಿ ಪ್ರಧಾನಿ ನರೇಂದ್ರ ಮೋದಿಯೂ ಒಂದು ವಾಕ್ಯದ ಹೇಳಿಕೆಯನ್ನು ನೀಡಿದ್ದಾರೆ. 

ಆದರೆ ಆಸಿಫಾ ಘಟನೆ, ಈ ದೇಶದ ಚಾರಿತ್ರಕ್ಕೆ ಸರಿಪಡಿಸಲಾಗದಷ್ಟು ಹಾನಿಯನ್ನುಂಟು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದನ್ನು ನೆನಪಿಟ್ಟುಕೊಳ್ಳಬೇಕು. ಹತ್ಯೆಗೀಡಾದ ಬಾಲಕಿಯ ಕುಟುಂಬ ಬಖೇರ್‌ವಾಲ್ ಅಲೆಮಾರಿ ಜನಾಂಗಕ್ಕೆ ಸೇರಿದ್ದಾಗಿದೆ. ಈ ಸಮುದಾಯ ಕಳೆದ ಐದು ದಶಕಗಳಿಂದ ಜಮ್ಮು ಭಾಗದಲ್ಲಿ ಹರಡಿಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದಾಗ, ಕಾರ್ಗಿಲ್‌ನಾದ್ಯಂತ ಪಾಕಿಸ್ತಾನದ ಉಗ್ರರು ಹರಡಿಕೊಂಡರು. ನಮ್ಮ ಗುಪ್ತಚರರಿಗೆ ಇದರ ಅರಿವೇ ಇದ್ದಿರಲಿಲ್ಲ. ಈ ಸಂದರ್ಭದಲ್ಲಿ ಉಗ್ರರು ಭಾರತವನ್ನು ಸುತ್ತಿಕೊಂಡ ಮಾಹಿತಿಯನ್ನು ಸರಕಾರಕ್ಕೆ ನೀಡಿದವರು ಇದೇ ಬಖೇರ್‌ವಾಲ್ ಅಲೆಮಾರಿ ಜನಾಂಗಕ್ಕೆ ಸೇರಿದವರು. ಇಂದಿಗೂ ಅವರು ಗಡಿಭಾಗದಲ್ಲಿ ಗುಪ್ತಚರರು ಮಾಡುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಒಂದು ರೀತಿಯಲ್ಲಿ ಅಘೋಷಿತವಾಗಿ ಭಾರತದ ಗಡಿಯನ್ನು ಕಾಯುತ್ತಾ ಬಂದವರು. ಇಂದು ಸರಕಾರ ನ್ಯಾಯ ನೀಡಬೇಕಾದುದು ಬರೇ ಆಸಿಫಾ ಎನ್ನುವ ತರುಣಿಗೆ ಮಾತ್ರವಲ್ಲ, ಕಳೆದ ಕೆಲವು ದಶಕಗಳಿಂದ ಅಭದ್ರತೆಯಿಂದ ಜಮ್ಮುವಿನಲ್ಲಿ ಬದುಕುತ್ತಿರುವ ಆ ಅಲೆಮಾರಿ ಜನಾಂಗ ಆತ್ಮವಿಶ್ವಾಸದಿಂದ, ನೆಮ್ಮದಿಯಿಂದ ಬದುಕುವ ಒಂದು ವಾತಾವರಣವನ್ನು ಸರಕಾರ ನಿರ್ಮಾಣ ಮಾಡಿಕೊಡಬೇಕಾಗಿದೆ. ಅವರ ಆಮೂಲಾಗ್ರ ಅಭಿವೃದ್ಧಿಗೆ ಸರಕಾರ ಸ್ಪಂದಿಸಬೇಕು. ಬಹುಶಃ ತನ್ನ ಕೈಯಲ್ಲಿ ಅಂಟಿಕೊಂಡಿರುವ ರಕ್ತದ ಕಲೆಗಳನ್ನು ತೊಳೆದುಕೊಳ್ಳಲು ಇದು ಸರಕಾರದ ಮುಂದೆ ಉಳಿದಿರುವ ಒಂದು ಮಾರ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News