×
Ad

ನನ್ನ ಮಗಳ ಹೆಸರಿಗೆ ಕಥುವಾ ಸಂತ್ರಸ್ತ ಬಾಲಕಿಯ ಹೆಸರು ಜೋಡಣೆ: ಪ್ರತಿಭಾ ಕುಳಾಯಿ

Update: 2018-04-16 12:12 IST

ಮಂಗಳೂರು, ಎ.16: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಂತ್ರಸ್ತ ಬಾಲಕಿಗೂ, ನನ್ನ ಮಗಳಿಗೂ 8 ವರ್ಷ ಪ್ರಾಯ. ಆದ್ದರಿಂದ ಸಂತ್ರಸ್ತ ಬಾಲಕಿಯನ್ನು ನನ್ನ ಮಗಳೊಂದಿಗೆ ಹೋಲಿಕೆ ಮಾಡಲಿಚ್ಚಿಸುತ್ತೇನೆ. ಈ ಮೂಲಕ ಬಾಲಕಿಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತೇನೆ ಎಂದು ಕಾಂಗ್ರೆಸ್‌ನ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‌ನ ಮಹಿಳಾ ಘಟಕದ ಸದಸ್ಯರು ಹಾಗೂ ಪುತ್ರಿ ಜತೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾನು ಹಿಂದೂವಾಗಿದ್ದರೂ ಬಿಜೆಪಿಯ ಹಿಂದೂಗಳೆದುರು ನಾನೂ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಪಡುವ ಪರಿಸ್ಥಿತಿ ಎದುರಾಗಿದೆ ಎಂದರು.

ಹಿಂದೂಗಳ ರಕ್ಷಕರೆಂದು ಕರೆಸಿಕೊಂಡು ಭಾರತ್ ಮಾತಾ ಕಿ ಜೈ ಎನ್ನುವವರು ಅದೆಷ್ಟು ಮಹಿಳೆಯರಿಗೆ ರಕ್ಷಣೆ ನೀಡುತ್ತಾರೆ ಎಂಬುದನ್ನು ತಾನು ಖುದ್ದಾಗಿ ಅನುಭವಿಸಿದ್ದೇನೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭ ಕೋಡಿಕೆರೆ ಎಂಬಲ್ಲಿ ಪ್ರಚಾರಕ್ಕೆ ಹೋದ ಸಂದರ್ಭ ಅಲ್ಲಿ ನಾನು ಪ್ರಚಾರ ಮಾಡದಂತೆ ತಡೆಯೊಡ್ಡಿದ್ದಲ್ಲದೆ, ಬಳಿಕ ಮನೆಗೆ ಬಂದು ಹಲವು ರೀತಿಯಲ್ಲಿ ನನಗೆ ಬೆದರಿಕೆಯೊಡ್ಡಿದ ಈ ಹಿಂದೂಗಳೆಂದು ಕರೆಸಿಕೊಳ್ಳುವ ನನ್ನ ಸಹೋದರರು ಮಾಡಿರುವ ಕುತಂತ್ರಗಳ ವೀಡಿಯೋ ನನ್ನ ಬಳಿ ಇದೆ ಎಂದ ಪ್ರತಿಭಾ ಕುಳಾಯಿ, ಕೆಲ ವೀಡಿಯೋ ತುಣುಕಗಳನ್ನು ಪ್ರದರ್ಶಿಸಿದರು. ಬಿಜೆಪಿಯ ಹಿಂದೂಗಳು ನನ್ನ ಮನೆಗೆ ಗುಂಪಲ್ಲಿ ಬಂದು ಅಶ್ಲೀಲವಾಗಿ, ಅನಾಗರಿಕರ ರೀತಿಯಲ್ಲಿ ವರ್ತಿಸಿದ್ದಾರೆ. ಇದು ಪ್ರಸಕ್ತ ಸಮಯ ಎಂಬ ನೆಲೆಯಲ್ಲಿ ಹಿಂದಿನ ಘಟನೆಗಳನ್ನು ನೆನಪಿಸುತ್ತಿದ್ದೇನೆ. ಮತ್ತೆ ಚುನಾವಣೆಯ ಸಂದರ್ಭ ನನಗೆ ಪ್ರಚಾರಕ್ಕೆ ಆ ಸ್ಥಳಗಳಿಗೆ ಹೋಗಲಿಕ್ಕಿದೆ. ಆ ಸಂದರ್ಭ ಮತ್ತೆ ಅಂತಹ ಪರಿಸ್ಥಿತಿ ಎದುರಾಗದಿರಲಿ ಎನ್ನುವ ದೃಷ್ಟಿಯಿಂದ ಈ ವೀಡಿಯೊಗಳನ್ನು, ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಕರಣಗಳ ಬಗ್ಗೆ ದೂರು ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ, ಈಗಾಗಲೇ ಹಲವಾರು ದೂರುಗಳನ್ನು ನೀಡಲಾಗಿದೆ. ಅವರೆಲ್ಲ ನನ್ನ ಅಣ್ಣ ತಮ್ಮಂದಿರೇ ತಾನೇ ಎಂದು ವ್ಯಂಗ್ಯವಾಗಿ ನುಡಿದ ಅವರು, ಜನತೆಗೆ ಅದು ತಿಳಿದಿರಲಿ. ಯಾರಿಗೆ ಬೇಕಾದರೂ ಮತ ಹಾಕಿ, ಆದರೆ ಆಲೋಚನೆ ಮಾಡಿ ಮತ ಹಾಕಿ ಎಂದಷ್ಟೇ ನಾನು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಪಬ್ ದಾಳಿ, ಹೋಂ ಸ್ಟೇ ಪ್ರಕರಣದಲ್ಲಿ ಸುಶಿಕ್ಷಿತ, ಬುದ್ಧಿವಂತರ ನಗರ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲೂ ಮಹಿಳೆಯರಿಗೆ ಅದೆಷ್ಟು ಗೌರವ ನೀಡಲಾಗುತ್ತದೆ ಎಂಬುದು ಸಾಬೀತಾಗಿದೆ. ಭೇಟಿ ಬಚಾವೊ ಎಂದು ಘೋಷಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಳೆದ ಐದು ವರ್ಷಗಳಲ್ಲಿ ಮಹಿಳೆಯರ ಮೇಲೆ ಅತ್ಯಧಿಕ ಅಪರಾಧ ಪ್ರಕರಣಗಳು ದಾಖಲಾಗಿರುವುದು ವರದಿಯಿಂದ ತಿಳಿಯುತ್ತದೆ. ತಮ್ಮ ಪತ್ನಿಯನ್ನೇ ಬಿಟ್ಟ ನಮ್ಮ ಕಾವಲುಗಾರ, ಜೋಗಿ ಆಗಿರುವ ಯೋಗಿ ಆದಿತ್ಯನಾಥರಿಗೆ ಹೆಣ್ಣು ಮಕ್ಕಳ ಬಗ್ಗೆ ಅರಿವಾದರೂ ಹೇಗೆ? ಎಂದವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಲತಾ ಸಾಲ್ಯಾನ್, ಜೆಸಿಂತಾ ಡಿಸೋಜ, ಶಕುಂತಳಾ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News