×
Ad

ಮತದಾನ ದೇಶಕ್ಕೆ ಕೊಡುವ ಕೊಡುಗೆ: ಶಿವಾನಂದ ಕಾಪಶಿ

Update: 2018-04-16 20:17 IST

ಶಿರ್ವ,ಎ.16: ಮತದಾನದ ಮೂಲಕ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ದೇಶಕ್ಕೆ ಕೊಡುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಶಿವಾನಂದ ಕಾಪಶಿ ಹೇಳಿದರು. 

ಅವರು ಸೋಮವಾರ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಪು ಮತ್ತು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ವಿದ್ಯಾಲಯದ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ "ಮತದಾನದ ಜಾಗೃತಿ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಮತದಾನದ ಮಹತ್ವ ತಿಳಿದುಕೊಳ್ಳಬೇಕು. ನಾವು ಮಾಡಿದ ಮತದಾನದ ಪ್ರಭಾವ ನಮ್ಮ ಜೀವನದ ಬೇರೆಬೇರೆ ರಂಗಗಳಲ್ಲಿ ನಮಗೆ ಅರಿವಿಲ್ಲದೆ ಪ್ರಭಾವ ಬೀರುತ್ತದೆ. ವಿವೇಚನೆಯಿಂದ ಮತದಾನ ಮಾಡುವುದು, ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವುದು, ಅರ್ಹವ್ಯಕ್ತಿಯನ್ನು ಅಯ್ಕೆ ಮಾಡುವುದು  ನಮ್ಮ ಕರ್ತವ್ಯವಾಗಿದೆ. ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಬಹುಮುಖ್ಯ ಘಟ್ಟ ಎಂದು ನುಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಶ್ರೀಮತಿ ರೋಹಿಣಿ, "ಸುಭದ್ರ ಪ್ರಜಾಪ್ರಭುತ್ವಕ್ಕೆ ಸರ್ವರ ಪಾಲ್ಗೊಳ್ಳುವಿಕೆ" ಧ್ಯೇಯವಾಕ್ಯದಂತೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಹಾಡುಗಳು, ಯಕ್ಷಗಾನ, ಜಾಥಾ ವಿವಿಧ ಅಕರ್ಷಣೆಗಳೊಂದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆಗಾಗಿ ನೀಡುವ ರಜೆಯನ್ನು ಇನ್ನಿತರ ಕಾರ್ಯಕ್ಕೆ ಬಳಸದೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಶ್ರೀಸೋದೆ ವಾದಿರಾಜ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಇದರ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ತಿರುಮಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಭೋದಿಸಿದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ಸುವರ್ಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ರಾಜ್ಯ ಸಂಪನ್ಮೂಲವ್ಯಕ್ತಿ ಅಶೋಕ್ ಕಾಮತ್ ಮತದಾನದ ಜಾಗೃತಿ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಉಪನ್ಯಾಸಕ ಕಿಶೋರ್ ಕುಮಾರ್ ಆರೂರು ಅಹ್ವಾನಿತ ಗಣ್ಯರಿಗೆ ಪುಷ್ಪನೀಡಿ ಗೌರವಿಸಿದರು.ರಾಜ್ಯ ಸಂಪನ್ಮೂಲವ್ಯಕ್ತಿ ಜೋಸೆಫ್ ರೆಬೆಲ್ಲೊ, ಉಡುಪಿ ತಾ.ಪಂ.ವ್ಯವಸ್ಥಾಪಕ ಕೆ.ಜಿ.ರಾಮದಾಸ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಶಿರ್ವ ನಿರೂಪಿಸಿದರು. ಕುಮಾರಿ ಚಿನ್ಮಯಿ ಪ್ರಾರ್ಥಿಸಿದರು.

ಕಾಲೇಜಿನ ಎನ್‍ಎಸ್‍ಎಸ್, ರೋಟರ್ಯಾಕ್ಟ್, ಇಂಡಿಯನ್ ರೆಡ್‍ಕ್ರಾಸ್ ಘಟಕದ ಸದಸ್ಯರು ಸೇರಿದಂತೆ 600ಕ್ಕೂ ಅಧಿಕ ಉದಯೋನ್ಮುಖ ಮತದಾರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಕರುಣಾಕರ ನಾಯಕ್ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News