ಹಿದಾಯ ಅರೆಬಿಕ್ ಶಿಕ್ಷಕ ತರಬೇತಿ ಸಂಸ್ಥೆಯ ಪದವಿ ಪ್ರದಾನ ಸಮಾರಂಭ

Update: 2018-04-17 05:28 GMT

ಮಂಗಳೂರು, ಎ.17: ವಿದ್ಯಾರ್ಥಿಗಳು ಪದವಿಯನ್ನು ಪಡೆಯುವ ಜೊತೆಯಲ್ಲಿ ಬದುಕಿನ ಮೌಲ್ಯವನ್ನು ಉನ್ನತೀಕರಿಸುತ್ತಾ ಪದವಿಯ ಮೌಲ್ಯವನ್ನು ಎತ್ತರಿಸಬೇಕು ಎಂದು ರೋಶನಿ ನಿಲಯದ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ಯಾಂಡ್ರ ಸುನಿತಾ ಲೋಬೊ ಅಭಿಪ್ರಾಯ ಪಟ್ಟರು. ಹಿದಾಯ ಮೆಸ್ಕೋ ಅರೆಬಿಕ್ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇದರ 2017-18ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

 ಮಂಗಳೂರಿನ ಐ.ಎಂ.ಎ. ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ಬನಾತ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಶಹನಾಝ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ತರಬೇತಿ ಹೊಂದಿದ ಸುಮಾರು 42 ಪದವೀಧರರಿಗೆ ಪದವಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭ ದೇರಳಕಟ್ಟೆ ಸೇವಾಶ್ರಮದ ಸಂಚಾಲಕಿ ಗೀತಾ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಹೈದರಾಬಾದ್‌ನ ಮೆಸ್ಕೋ ಸಂಸ್ಥೆಯ ನಿರ್ದೇಶಕ ಡಾ.ಇಫ್ತಿಕಾರುದ್ದೀನ್, ಹೈದರಾಬಾದ್‌ನ ಎಂ.ಎಸ್.ಎನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಮಿಸ್ಬಾವುದ್ದೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಹನಾಝ್ ಅಹ್ಮದ್ ಸ್ವಾಗತಿಸಿದರು, ವಿದ್ಯಾರ್ಥಿನಿ ಸಫರಾ ವಂದಿಸಿದರು. ಸಫ್ವಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News