×
Ad

ಕರಾವಳಿಯಲ್ಲಿ ಕೋಮು ವಿಷಬೀಜ ಬಿತ್ತುವವರು ಗಡಿಕಾಯುವ ಯೋಧರನ್ನು ನೋಡಿ ಕಲಿಯಲಿ

Update: 2018-04-17 16:49 IST

ಮಂಗಳೂರು, ಎ.17: ಬಿ.ಎಂ. ಮಹಮ್ಮದ್ ಮದನಿ ಸ್ಮರಣಾರ್ಥ ಚೊಂಬುಗುಡ್ಡೆ ಫ್ರೆಂಡ್ಸ್, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಹಾಗೂ ಕರಾವಳಿಯ ಯೋಧ ಝುಬೈರ್ ಹಳೆನೇರಂಕಿಯವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನೂರುಲ್ ಹುದಾ ಮದ್ರಸ ಚೊಂಬುಗುಡ್ಡೆಯಲ್ಲಿ ನಡೆಯಿತು.

‘ಚೊಂಬುಗುಡ್ಡೆ ಫ್ರೆಂಡ್ಸ್’ ಹಾಗೂ 'ಬ್ಲಡ್ ಡೋನರ್ಸ್ ಮಂಗಳೂರು' ತಂಡದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಝುಬೈರ್ ರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಝುಬೈರ್ ಹಳೆನೇರಂಕಿ, ಕರಾವಳಿ ಕರ್ನಾಟಕದಲ್ಲಿ ಕೋಮು ವಿಷಬೀಜ ಬಿತ್ತುವವರು, ಭಾರತ ದೇಶಕ್ಕಾಗಿ ಹಗಲಿರುಳು ಗಡಿ ಕಾಯುವ ಯೋಧರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ಯೋಧರಲ್ಲಿ ಹಲವು ಜಾತಿ ಧರ್ಮದವರಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತೇವೆ. ಈ ಸೌಹಾರ್ದ ಇಲ್ಲಿಗೂ ಅನ್ವಯಗೊಳ್ಳಲಿ ಎಂದು ಹೇಳಿದರು.
 
ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪಿ.ಎ.ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಕಾರ್ಯಕ್ರಮ ಉದ್ಘಾಟಿಸಿದರು. ಚೆಂಬುಗುಡ್ಡೆ ಜುಮಾ ಮಸೀದಿ ಖತೀಬ್ ಸಿದ್ದೀಕ್ ಅಹ್ಸನಿ ದುವಾಶೀರ್ವಚನ ನೆರವೇರಿಸಿದರು.

ಡಾ.ಮುರಳೀ ಮೋಹನ್ ಚೂಂತಾರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್,  ಡಾ.ಯು.ಟಿ. ಇಫ್ತಿಕಾರ್ , ರೆ. ಫಾದರ್ ಕುಮಾರ್ ಕೊಟಿಯನ್, ಬಾಝಿಲ್ ಡಿಸೋಜ, ಪಿಲಾರ್ ಮಸ್ಜಿದ್ ಅಧ್ಯಕ್ಷ ಕೆ ಎ ಅಬೂಬಕ್ಕರ್, ಉಪಾಧ್ಯಕ್ಷ ಅಬ್ಬಾಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸದಸ್ಯರಾದ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಮುಸ್ತಫ  ಕೆ ಸಿ ರೋಡ್, ಸಮೀರ್ ಕಡವಿನಬಾಗಿಲು ಮತ್ತಿತರರು ಭಾಗವಹಿಸಿದ್ದರು.

ಝಹೀರ್ ಶಾಂತಿನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News