ಸಿಪಿಎಂ ವಿರುದ್ಧ ಕಾಂಗ್ರೆಸ್, ಬಿಜೆಪಿಯಿಂದ ಸುಳ್ಳು ದೂರು: ಸುನೀಲ್ ಕುಮಾರ್ ಆರೋಪ

Update: 2018-04-17 17:07 GMT

ಮಂಗಳೂರು, ಎ. 17: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಸಿಪಿಎಂ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದು, ಇದನ್ನು ಸಹಿಸದ ಕಾಂಗ್ರೆಸ್ ಮತ್ತು ಬಿಜೆಪಿ ಭಯಭೀತಿಯಿಂದ ಸುಳ್ಳು ದೂರನ್ನು ನೀಡಿದ್ದಾರೆ. ಅಲ್ಲದೆ, ರಾಜಕೀಯ ಸಮಾವೇಶವನ್ನು ರದ್ದುಗೊಳಿಸಲು ಹತಾಶ ಪ್ರಯತ್ನವನ್ನು ಈ ಎರಡೂ ಪಕ್ಷಗಳು ನಡೆಸಿವೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

ನಗರದಲ್ಲಿ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಿಪಿಎಂ ಆಯೋಜಿಸಿದ ರಾಜಕೀಯ ಸಮಾವೇಶಕ್ಕೆ ನಿವೇಶನ ರಹಿತರ ಪ್ರಮುಖ ಸದಸ್ಯರಿಗೆ ಅಂಚೆ ಪತ್ರದ ಮೂಲಕ ಆಹ್ವಾನ ನೀಡಲಾಗಿತ್ತು. ಇದರಿಂದ ಕಂಗಾಲಾದ ಕಾಂಗ್ರೆಸ್ ಸುದ್ದಿಗೋಷ್ಠಿಯನ್ನು ನಡೆಸಿ ಸುಳ್ಳು ವಿಚಾರಗಳನ್ನು ಹರಿಯಬಿಟ್ಟಿದ್ದಾರೆ. ಆಮಿಷದ ನೆಪವನ್ನು ಒಡ್ಡಿ ಸಿಪಿಎಂ ರಾಜಕೀಯ ಸಮಾವೇಶವನ್ನು ರದ್ದುಗೊಳಿಸಲು ಪಿತೂರಿ ನಡೆಸಿದ್ದರು. ಕ್ಷೇತ್ರದ ಚುನಾವಣಾ ಅಧಿಕಾರಿಗಳು ಅಂಚೆ ಪತ್ರದಲ್ಲಿ ಆಮಿಷ ವಿಚಾರ ಇಲ್ಲ ಎಂದಾಗ ಸ್ವತಃ ಜೆ.ಆರ್.ಲೋಬೊ ಅವರು ಜಿಲ್ಲಾಧಿಕಾರಿಯವರಿಗೆ ಒತ್ತಡ ಹಾಕಿದ್ದರು. ನಿವೇಶನ ರಹಿತರಿಗೆ ಫೋನ್ ಕರೆ ಮಾಡಿ ಸಭೆಗೆ ಹೋಗದಂತೆ ಒತ್ತಡ ಹಾಕಿದ್ದಾರೆ. ಅಲ್ಲದೆ, ಬಿಜೆಪಿಯವರ ಮೇಲೂ ಒತ್ತಡ ಹಾಕಿ ಸಿಪಿಎಂ ವಿರುದ್ಧ ದೂರು ನೀಡಲು ಪ್ರೋತ್ಸಾಹ ನೀಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಇಂತಹ ಕೀಳುಮಟ್ಟದ ರಾಜಕೀಯ ನಡೆಸಿದ ಜೆ.ಆರ್.ಲೋಬೊ ಅವರ ನಡೆ ತೀರಾ ದ್ವೇಷಪೂರಿತವಾಗಿದೆ ಎಂದರು.

ಕ್ಷೇತ್ರದ ಜನರು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೋಮುವಾದದ ವಿಷ ಜ್ವಾಲೆಯಿಂದ ಮಂಗಳೂರಿನ ಸೌಹಾರ್ದವನ್ನು ಹಾಳುಗೆಡವಿದ ಬಿಜೆಪಿ ಹಾಗೂ ಕೋಮುವಾದವನ್ನು ಮಟ್ಟ ಹಾಕಲು ಕಾಳಜಿ ವಹಿಸದ, ಅಭಿವೃದ್ಧಿಯ ಬಗ್ಗೆ ಸ್ಪಷ್ಟನೆ ಕಾಂಗ್ರೆಸ್ ಪಕ್ಷಗಳ ಬಗ್ಗೆ ಕ್ಷೇತ್ರದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ಸುನೀರ್ ಕುಮಾರ್ ಬಜಾಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಎಂನ ಸಂತೋಷ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ ಉಪಸ್ಥಿತರಿದ್ದರು.

ಎ.23ರಂದು ನಾಮಪತ್ರ ಸಲ್ಲಿಕೆ
ಎ.3ರಂದು ಬೆಳಗ್ಗೆ 10:30ಕ್ಕೆ ನಗರದ ಪಿವಿಎಸ್ ಜಂಕ್ಷನ್‌ನಿಂದ ಪಾಲಿಕೆವರೆಗೆ ಪಾದಯಾತ್ರೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News