×
Ad

ಅಭಿವೃದ್ಧಿಯೇ ಶ್ರೀ ರಕ್ಷೆ: ಮೊಯ್ದಿನ್ ಬಾವ

Update: 2018-04-18 18:22 IST

ಮಂಗಳೂರು, ಎ.18: ಈ ಭಾರಿಯ ಚುನಾವಣೆಯ ಯಾವುದೇ ಜಾತಿ, ಧರ್ಮದ ಆಧಾರದಲ್ಲಿ ನಡೆಯದೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆಯಲಿದೆ. ತಾನು ಕಳೆದ ಐದು ವರ್ಷದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ತನಗೆ ಶ್ರೀರಕ್ಷೆಯಾಗಲಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವ ಹೇಳಿದರು.

ಸುರತ್ಕಲ್‌ನಲ್ಲಿ ಪಕ್ಷದ ಚುನಾವಣಾ ಕಚೇರಿಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಐದು ವರ್ಷದಲ್ಲಿ ನಾನಾ ಇಲಾಖೆಯ ಮೂಲಕ 750 ಕೋ.ರೂ.ಗೂ ಅಧಿಕ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 303 ಕೋ.ರೂ.ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ತಾನು ಶಾಸಕನಾಗಿ ಆಯ್ಕೆಯಾಗುವ ತನಕ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದೆ. ಬಳಿಕ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಎಲ್ಲ ಜನಸಾಮಾನ್ಯರ ಪ್ರತಿನಿಧಿಯಾಗಿದ್ದೆ. ಯಾವುದೇ ರಾಜಕೀಯ ಮಾಡದೆ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ ಹಾಗೂ ಎಲ್ಲಾ ಗ್ರಾಪಂಗಳಲ್ಲೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಗೆ ಬಂದ ಅನುದಾನದಿಂದ ನಗರ ಪ್ರದೇಶದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿತ್ತು. ಪಾಲಿಕೆಯ ಶೇ. 40ರಷ್ಟು ವಾರ್ಡ್‌ಗಳು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವುದರಿಂದ ತಾನು ಶಾಸಕನಾದ ಬಳಿಕ ಪಾಲಿಕೆಗೆ ಬಂದ ಅನುದಾನದ ಶೇ. 40ರಷ್ಟು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಿಡುವಂತೆ ಒತ್ತಡ ಹೇರಿ ಕಾಮಗಾರಿ ನಡೆಸುವಲ್ಲಿ ಯಶಸ್ವಿಯಾಗಿರುತ್ತೇನೆ. ಇದರಿಂದಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಿಂದ ಗಣನೀಯ ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಾಲಿಕೆಗೆ ಬರುವ ವಿಶೇಷ ಅನುದಾನ, ಮುಖ್ಯಮಂತ್ರಿಗಳ ವಿಶೇಷ ಅನುದಾನ, ಎಸ್‌ಎಫ್‌ಸಿ ವಿಶೇಷ ಅನುದಾನ, ಪಾಲಿಕೆ ಅನುದಾನ, ಪ್ರೀಮಿಯಂ ಎಫ್‌ಎಆರ್ ಹೀಗೆ ನಾನಾ ಮೂಲಗಳಿಂದ ಬರುವ ಎಲ್ಲ ಅನುದಾನದ ಶೇ. 40ರಷ್ಟು ಮೊತ್ತದ ಕಾಮಗಾರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಬಹುತೇಕ ಎಲ್ಲ ರಸ್ತೆಗಳು, ಚರಂಡಿ, ಒಳಚರಂಡಿ, ಕುಡಿಯುವ ನೀರು ಮುಂತಾದ ಕಾಮಗಾರಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಸಭೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಭಾರ ಅಧ್ಯಕ್ಷ ದೀಪಕ್ ಪೂಜಾರಿ, ಉಸ್ತುವಾರಿ ದೇವಿಪ್ರಸಾದ್ ಶೆಟ್ಟಿ, ಪಾಲಿಕೆ ಸದಸ್ಯ ಮಹಾಬಲ ಮಾರ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News