ಭಟ್ಕಳದಲ್ಲಿ 140, ಹೊನ್ನಾವರದಲ್ಲಿ 108 ಮತಗಟ್ಟೆಗಳು: ಎನ್. ಸಿದ್ಧೇಶ್ವರ

Update: 2018-04-18 14:44 GMT

ಭಟ್ಕಳ, ಎ. 18: ಮೇ.12ರಂದು ನಡೆಯಲಿರುವ 79ನೇ ಭಟ್ಕಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಫೆ.28ರ ತನಕ 2,12,590 ಮತದಾರರಿದ್ದು ನಂತರ ನಡೆದ ನೋಂದಣಿ ಅಭಿಯಾನದಲ್ಲಿ 1,381 ಜನರು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕಮಿಷನರ್ ಎನ್. ಸಿದ್ಧೇಶ್ವರ ಹೇಳಿದರು.

ಅವರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 79ನೇ ಭಟ್ಕಳ ವಿಧಾನ ಸಭಾ ಕ್ಷೇತ್ರವು ಭಟ್ಖಳ ಹಾಗೂ ಹೊನ್ನಾವರ ತಾಲೂಕನ್ನೊಳಗೊಂಡಿದ್ದು ಭಟ್ಕಳದಲ್ಲಿ 140 ಮತಗಟ್ಟೆಗಳು, ಹೊನ್ನಾವರದಲ್ಲಿ 108 ಮತಗಟ್ಟೆಗಳಿವೆ. 3 ಹೆಚ್ಚುವರಿ ಮತಗಟ್ಟೆಗಳನ್ನು ಮಾಡಿದ್ದು ಎಲ್ಲಾ ಮತಗಟ್ಟೆಗಳಲ್ಲಿಯೂ ಕೂಡಾ ಚುನಾವಣಾ ಆಯೋಗದ ನಿರ್ದೇಶನದಂತೆ ಮೂಲಭೂತ ಸೌಕರ್ಯಗಳನ್ನು, ವಿಶೇಷ ಚೇತನರಿಗೆ ಮತದಾನ ಮಾಡಲು ಅಗತ್ಯದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.

ಮತದಾರರ ಪಟ್ಟಿಯಲ್ಲಿ ಗಣ್ಯ ವ್ಯಕ್ತಿಗಳ ಹೆಸರು ಬಿಟ್ಟು ಹೋಗದಂತೆ ಪರಿಶೀಲನೆ ಮಾಡಲಾಗಿದ್ದು ಎಲ್ಲಾ ಗಣ್ಯ ವ್ಯಕ್ತಿಗಳ ಹೆಸರು ದಾಖಲಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ವಿಧಾನ ಸಭಾ ಕ್ಷೇತ್ರದಲ್ಲಿ 26 ಸೆಕ್ಟರ್‌ಗಳನ್ನು ಮಾಡಿದ್ದು ಪ್ರತಿಯೊಂದು ಸೆಕ್ಟರ್ ಅಧಿಕಾರಿಗಳು ತಮ್ಮ ತಮ್ಮ ಕೆಲಸವನ್ನು ನಿರ್ವಹಿಸಲಿದ್ದಾರೆ. 6 ಫ್ಲೈಯಿಂಗ್ ಸ್ಕ್ವಾಡ್‌ಗಳು ದಿನದ 24 ತಾಸುಗಳೂ ಕೂಡಾ ಕೆಲಸ ಮಾಡುತ್ತವೆ. ವಿಧಾನ ಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ 5 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಆಗಾಗ ವಾಹನ ಇತ್ಯಾದಿಗಳನ್ನು ತಪಾಸಣೆ ಮಾಡಲಾಗುತ್ತದೆ. ಈಗಾಗಲೇ ಗೇರುಸಪ್ಪಾ ಚೆಕ್ ಪೋಸ್ಟ್‌ನಲ್ಲಿ 4.40 ಲಕ್ಷ ಹಾಗೂ ಗೊರಟೆ ಚೆಕ್ ಪೋಸ್ಟ್‌ನಲ್ಲಿ 1,00,577 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಮತಗಟ್ಟೆಗಳಾದ ಗೇರಸಪ್ಪ ಹತ್ತಿರದ   ಹಾಡಗೇರಿ ಹಾಗೂ ಸಿದ್ಧಾಪುರಕ್ಕೆ ಹೊಂದಿಕೊಂಡಿರುವ ಹೊನ್ನಾವರ ತಾಲೂಕಿನ ಹುಲಗೀಬೀಡಿಗೆ ಭೇಟಿ ನೀಡಿದ್ದು ಅಲ್ಲಿಯೂ ಕೂಡಾ ಎಲ್ಲಾ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲದ ಕಡೆಗಳಲ್ಲಿ ಪಂಚಾಯತ್‌ರಾಜ್ ಇಲಾಖೆಯಿಂದ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಈ ಬಾರಿ ಪ್ರತಿಯೊರ್ವರೂ ಕೂಡಾ ಆಗಮಿಸಿ ಮತದಾನ ಮಾಡುವಲ್ಲಿ ಅಗತ್ಯದ ಕ್ರಮ ಕೈಗೊಳ್ಳಲಾಗಿದ್ದು ಆ ಕುರಿತು ಸಾಕಷ್ಟು ಪ್ರಚಾರವನ್ನು ಕೂಡಾ ಮಾಡಲಾಗಿದೆ. ಚುನಾವಣಾ ಮತ ಯಂತ್ರ ಹಾಗೂ ವಿವಿ ಪ್ಯಾಟ್ ಕುರಿತು ತಿಳಿವಳಿಕೆ ನೀಡಲಾಗುತ್ತಿದ್ದು ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ವ್ಯವಸ್ಥೆಗೊಳಿಸಲಾಗಿದೆ ಎಂದರು. ರಾಜ್ಯದಲ್ಲಿ ವಿವಿ ಪ್ಯಾಟ್ ಮೊದಲಬಾರಿ ಬಳಕೆಯಾಗುತ್ತಿರುವುದರಿಂದ ಜನರಿಗೆ ಹೆಚ್ಚು ತಿಳುವಳಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಐ.ಎ.ಎಸ್. ಅಧಿಕಾರಿ ಅನಂತ, ತಹಶೀಲ್ದಾರ್ ವಿ.ಪಿ. ಕೊಟ್ರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News