×
Ad

ಮಾರಕಾಯುಧದಿಂದ ದಾಳಿಗೊಳಗಾದ ಯುವಕನ ನೆರವಿಗೆ ಸ್ಪಂದಿಸದ ಜನಪ್ರತಿನಿಧಿಗಳು

Update: 2018-04-19 19:20 IST

ಮಂಗಳೂರು, ಎ.19: ನಗರ ಹೊರವಲಯದ ಕಸಬಾ ಬೆಂಗರೆಯಲ್ಲಿ ಎ.8ರ ರಾತ್ರಿ 11 ಗಂಟೆಗೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ ಮೂವರು ಯುವಕರ ಪೈಕಿ ಮುಹಮ್ಮದ್ ಸಿರಾಜ್ ಮತ್ತು ಮುಹಮ್ಮದ್ ಇಜಾಝ್ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರೆ, ಗಂಭೀರ ಗಾಯಗೊಂಡಿದ್ದ ಕಸಬಾ ಬೆಂಗ್ರೆಯ ಯುವಕ ಅನ್‌ವೀಝ್ ಇನ್ನೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಹಾಗೆ ಕೋಮುಸೂಕ್ಷ್ಮ ಪ್ರದೇಶವಾದ ಬೆಂಗರೆಯಲ್ಲಿ ವಿನಾ ಕಾರಣ ನಡೆದ ಈ ಕೃತ್ಯದಲ್ಲಿ ಗಾಯಗೊಂಡ ಅನ್‌ವೀಝ್‌ನನ್ನು ಈವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಭೇಟಿಯಾಗಿ ಸಾಂತ್ವನ ಹೇಳಲಿಲ್ಲ. ಜಿಲ್ಲಾಡಳಿತದ ಮೂಲಕ ಸರಕಾರದ ಪರಿಹಾರಕ್ಕೆ ಪ್ರಯತ್ನಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಅನ್‌ವೀಝ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ನೀತಿ ಸಂಹಿತೆಗೆ ಭಯಪಟ್ಟು ಮೌನಕ್ಕೆ ತಾಳಿದೆ ಎಂದು ಹೇಳಲಾಗುತ್ತಿದೆ.

ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಅಶ್ರಫ್ ಎಂಬವರ ಪುತ್ರನಾಗಿರುವ ಅನ್‌ವೀಝ್ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಕೆಲಸದ ಹುಡುಕಾಟದಲ್ಲಿದ್ದ. ಆದರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ಘಟನೆಯಲ್ಲಿ ಗಾಯಗೊಂಡ ಮೂವರು ಯುವಕರು ಕೂಡ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿದ್ದವರಲ್ಲ. ಬೆಂಗ್ರೆಯಲ್ಲಿ ಕಳೆದ ತಿಂಗಳು ಮಲ್ಪೆಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮರಳಿ ಮನೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದವರಿಗೆ ತಂಡವೊಂದು ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಎ.8ರಂದು ಈ ಮೂವರು ಯುವಕರ ಕೊಲೆಯತ್ನ ನಡೆಸಿರಬೇಕು ಎಂದು ಶಂಕಿಸಲಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ಈ ಕೃತ್ಯವನ್ನು ಯಾರು, ಯಾತಕ್ಕಾಗಿ ನಡೆಸಿದರು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಸರಕಾರದಿಂದ ನೆರವು ಸಿಕ್ಕಿಲ್ಲ: ನನ್ನ ಮಗ ಯಾವ ಅಪರಾಧವನ್ನೂ ಮಾಡಿದವನಲ್ಲ. ಆದರೂ ದುಷ್ಕರ್ಮಿಗಳು ವಿನಾ ಕಾರಣ ನನ್ನ ಮಗನನ್ನು ಈ ಸ್ಥಿತಿಗೆ ತಂದು ಮುಟ್ಟಿಸಿದರು. ಇನ್ನೊಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಅವನಿನ್ನೂ ಸಂಪೂರ್ಣ ಗುಣಮುಖನಾದಂತಿಲ್ಲ. ತಲೆ ತಿರುಗಿದಂತಾಗುತ್ತದೆ ಎಂದು ಹೇಳುತ್ತಲೇ ಇದ್ದಾನೆ. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದರೂ ಕೂಡ 6 ತಿಂಗಳ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಈಗಾಗಲೆ ವೈದ್ಯಕೀಯ ಖರ್ಚು 1.50 ಲಕ್ಷ ರೂ. ದಾಟಿದೆ. ಅದನ್ನು ಹೇಗೆ ಭರಿಸಬೇಕು ಎಂದು ತಿಳಿಯುತ್ತಿಲ್ಲ. ಊರ ಯುವಕರು, ಮಸೀದಿಯ ಮುಖಂಡರು ನೆರವು ನೀಡಿದ್ದಾರೆ. ಆದರೆ, ಈವರೆಗೂ ನಮಗೆ ಸರಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜನಪ್ರತಿನಿಧಿಗಳೂ ಇತ್ತ ಬಂದು ಆರೋಗ್ಯ ವಿಚಾರಿಸಿಲ್ಲ. ನಮಗೆ ಇದು ಬೇಸರ ಉಂಟು ಮಾಡಿದೆ. ಘಟನೆ ನಡೆದು ಎರಡು ವಾರವಾದರೂ ಕೂಡ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿಲ್ಲ’ ಎಂದು ಅನ್‌ವೀಝ್‌ನ ತಂದೆ ಅಶ್ರಫ್ ‘ಪತ್ರಿಕೆ’ಗೆ ತಿಳಿಸಿದ್ದಾರೆ.

ಈ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ಸ್ಥಳೀಯ ಮಸೀದಿಯ ಆಡಳಿತ ಕಮಿಟಿ ಮತ್ತು ಪಿಎಫ್‌ಐ ಸಂಘಟನೆಯು ನೆರವು ನೀಡಿದೆ. ಸಂತ್ರಸ್ತ ಯುವಕರಿಗೆ ಪಿಎಫ್‌ಐ ಕಾನೂನು ನೆರವು ನೀಡುತ್ತಿದೆ ಎಂದು ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಮುನೀಬ್ ಬೆಂಗರೆ ಪತ್ರಿಕೆಗೆ ತಿಳಿಸಿದ್ದಾರೆ.

ಎಸ್‌ಡಿಪಿಐ ಭೇಟಿ: ಅನ್‌ವೀಝ್‌ನನ್ನು ಎಸ್‌ಡಿಪಿಐ ನಿಯೋಗ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದೆ. ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿರುವ ಎಸ್‌ಡಿಪಿಐ, ಯುವಕನಿಗೆ ಆರ್ಥಿಕ ಪರಿಹಾರ ನೀಡಲು ಒತ್ತಾಯಿಸಿದೆ.

ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಮುನೀಬ್ ಬೆಂಗರೆ, ಆಸೀಫ್ ಬೆಂಗರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News