×
Ad

ಎ. 23: ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ನಾಮಪತ್ರ ಸಲ್ಲಿಕೆ

Update: 2018-04-20 18:13 IST

ಪುತ್ತೂರು, ಎ. 20; ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಎ.23 ರಂದು ನಾಮಪತ್ರ ಸಲ್ಲಿಸಲಿದ್ದು, ಕಾಂಗ್ರೆಸ್‌ನ ನೆಲ್ಲಿಕಟ್ಟೆ ಚುನಾವನಾ ಕಚೇರಿಯಿಂದ ಪಾದಯಾತ್ರೆ ಮೂಲಕ ಎಸಿ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಸುವ ಮೊದಲು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ, ವೆಂಕಟ್ರಮಣ ದೇವಾಲಯ, ನಾರಾಯಣ ಗುರು ಮಂದಿರ, ಕೇಂದ್ರ ಜುಮ್ಮಾ ಮಸೀದಿ ಮತ್ತು ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ನಡೆಸಲಿದ್ದಾರೆ.

ಎ.23ರಂದು ಮುಂಜಾನೆ 9.30ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, ಇದರಲ್ಲಿ ಉಪ್ಪಿನಂಗಡಿ ವಿಟ್ಲ ಬ್ಲಾಕ್ ಹಾಗೂ ಪುತ್ತೂರು ಬ್ಲಾಕ್ ವ್ಯಾಪ್ತಿಯಿಂದ ಸುಮಾರು 2 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. 10.30ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಬಳಿಕ ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಾಗುತ್ತಿದ್ದು, 4 ಸುತ್ತಿನ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಶಾಸಕಿ ಶಕುಂತಳಾ ಶೆಟ್ಟಿ ಅವರ ವೈಯುಕ್ತಿಕ ಸಾಧನೆ, ಸಚ್ಚಾರಿತ್ರ್ಯದ ರಾಜಕಾರಣ, ಸರಳತೆ, ಆದರ್ಶ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳು, ಅಭಿವೃದ್ಧಿಯನ್ನು ಆಧರಿಸಿ ಮತ ಯಾಚನೆ ನಡೆಸುತ್ತೇವೆ ಎಂದ ಅವರು ಬಿಜೆಪಿಯ ಆಂತರಿಕ ಭಿನ್ನಮತದ ಲಾಭ ನಮಗೆ ಬೇಡ. ಓರ್ವ ಮಹಿಳೆಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸಕ್ಕೆ ಈಗ ‘ಕೂಲಿ’ ಕೇಳುತ್ತಿದ್ದೇವೆ. ಖಂಡಿತಾ ಜನತೆ ಅವರಿಗೆ ಆಶೀರ್ವಾದ ಮಾಡಲಿದ್ದಾರೆ. ಹಾಗಾಗಿ ಶಕುಂತಳಾ ಶೆಟ್ಟಿ ಗೆಲುವು 100% ಕ್ಕೂ ಹೆಚ್ಚು ಗ್ಯಾರಂಟಿ ಎಂದವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು, ನಗರ ಕಾಂಗ್ರೇಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಬ್ಲಾಕ್ ಕಾಂಗ್ರೇಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಹಾಗೂ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಸೇವಾದಳದ ಸಂಘಟಕ ಜೋಕಿಂ ಡಿ’ಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News