ಕಾರ್ಕಳ : ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಗೋಪಾಲ ಭಂಡಾರಿ ನಾಮಪತ್ರ ಸಲ್ಲಿಕೆ
ಕಾರ್ಕಳ, ಎ. 20: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಗೋಪಾಲ ಭಂಡಾರಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನ ಉಡುಪಿ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಪ್ರದಾನ ಕಾರ್ಯದರ್ಶಿ ಶೇಖರ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಕುಸುಮ ನಾಮಪತ್ರ ಸ್ವೀಕರಿಸಿದರು.
ಮಾಧ್ಯಮಕ್ಕೆ ನಿಷೇಧ:
ಎಚ್.ಗೋಪಾಲ ಭಂಡಾರಿ ನಾಮಪತ್ರ ಸಲ್ಲಿಸುತ್ತಿರುವ ಭಾವಚಿತ್ರವನ್ನು ಕ್ಲಿಕ್ಕಿಸಲು ಅವಕಾಶ ಕೇಳಿದರೂ ಚುನಾವಣಾಧಿಕಾರಿ ಅದಕ್ಕೆ ಅವಕಾಶ ಕಲ್ಪಿಸಿಕೊಡಲಿಲ್ಲ. ಬಾಗಿಲ ಬಳಿ ನಿಂತು ವಿನಂತಿಸಿಕೊಂಡರೂ, ಹೌಹಾರಿಕೆ ಉತ್ತರವನ್ನು ನೀಡಿದ್ದರು. ಬಳಿಕ ನೀವೇನು ಅವಕಾಶ ಕೊಡುವುದಿಲ್ಲ ಎಂದು ಪ್ರಶ್ನಿಸಿದಾಗ, ಇಲ್ಲಿ ಅಕ್ರಮ ನಡೆಯುತ್ತಿದೆ ಎಂದು ಉಡಾಫೆಯಾಗಿ ಉತ್ತರಿಸಿದರು. ಅದನ್ನು ಪ್ರಶ್ನಿಸಿ ಪತ್ರಕರ್ತರು, ಭಾವಚಿತ್ರ ಮತ್ತು ವಿಡಿಯೋ ಚಿತ್ರೀಕರಣವನ್ನು ಪ್ರಶ್ನಿಸಿದರೆ ಈ ರೀತಿಯಾಗಿ ಉತ್ತರಿಸುವುದು ಸರಿಯೇ ? ಎಂದಾಗ, ಅದು ನನಗೆ ಗೊತ್ತಿಲ್ಲ ಇಲ್ಲಿಂದ ನಡೆಯಿರಿ ಎಂದು ಚುನಾವಣಾಧಿಕಾರಿ ದಬಾಯಿಸಿದರು. ಬಳಿಕ ಪೊಲೀಸರನ್ನು ಕರೆದು ಪತ್ರಕರ್ತರನ್ನು ಅಲ್ಲಿಂದ ತಳ್ಳಿ ಹೊರ ಹಾಕುವಂತೆ ಸೂಚಿಸಿದರು. ಆದರೆ ಪತ್ರಕರ್ತರು ಅಲ್ಲಿಂದ ಕದಡದ ಪರಿಣಾಮ, ಬಳಿಕ ತಾನೇ ವಿಡಿಯೋ ಚಿತ್ರೀಕರಣ ಮತ್ತು ಭಾವಚಿತ್ರವನ್ನು ಪತ್ರಕರ್ತರ ಕೈಗೆ ಒಪ್ಪಿಸುವ ಮೂಲಕ ಕ್ಷಮೆಯಾಚನೆ ನಡೆಸಿದ ಬಳಿಕ ಬಳಿಕ ಅಲ್ಲಿಂದ ತೆರಳಿದರು ಎಂದು ತಿಳಿದುಬಂದಿದೆ.
ನಾನು ರಾಜಕೀಯದಲ್ಲಿ ಹಣ ಮಾಡಿಲ್ಲ:-ಎಚ್.ಗೋಪಾಲ ಭಂಡಾರಿ
ನಾನು ರಾಜಕೀಯದಲ್ಲಿ ಹಣ ಗಳಿಸಿಲ್ಲ. ಒಬ್ಬ ಪ್ರಾಮಾಣಿಕ ಜನಪ್ರತಿನಿಧಿಯಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದ ಜನತೆಯೇ ನನ್ನ ಆಸ್ತಿ. ನನಗೆ ಜಾತಿ ಬಲವಿಲ್ಲ, ಹಣ ಬಲವಿಲ್ಲ ಎಂದು ಮಾಜಿ ಶಾಸಕ ಹಾಗೂ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಎಚ್.ಗೋಪಾಲ ಭಂಡಾರಿ ಹೇಳಿದ್ದಾರೆ.
ಅವರು ಕಿಸಾನ್ ಸಭಾ ಟ್ರಸ್ಟ್‌ನಲ್ಲಿ ಶುಕ್ರವಾರ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಾಮಾಜಿಕ ಅಸಮಾನತೆಯ ವಿರುದ್ದ ಹೋರಾಟ ನಡೆಸುವ ಮೂಲಕ ರಾಜಕೀಯ ಪ್ರವೇಶಿಸಿದ್ದೇನೆ. ಕಳೆದ ನಲ್ವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಭೂ-ನ್ಯಾಯ ಮಂಡಳಿಯ ಸದಸ್ಯನಾಗಿ ಅದೆಷ್ಟೋ ಕುಟುಂಬಗಳಿಗೆ ಭೂಮಿ ಒದಗಿಸಿದ್ದೇನೆ. ಅಧಿಕಾರವಿರಲಿ, ಇಲ್ಲದಿರಲಿ ಎಲ್ಲಾ ಸಂದರ್ಭದಲ್ಲೂ ಜನರ ಸೇವೆಗೈದಿದ್ದೇನೆ. ಪಕ್ಷದ ವರಿಷ್ಠರು ಹಾಗೂ ಹಿರಿಯ ನಾಯಕ ಡಾ.ಎಂ.ವೀರಪ್ಪ ಮೊಯ್ಲಿ ಅವರು ನನಗೆ ಮಗದೊಮ್ಮೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನನ್ನನ್ನು ಜನತೆ ಗೆಲ್ಲಿಸುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ್ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಭಾವಾ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಶ್ಯಾಮ ಶೆಟ್ಟಿ, ರವಿಶಂಕರ್ ಶೇರಿಗಾರ್, ಸುಬೋದ್ ಶೆಟ್ಟಿ, ಬಿಪಿನ್‌ಚಂದ್ರಪಾಲ್ ನಕ್ರೆ, ಮಂಜುನಾಥ ಪೂಜಾರಿ ಮುದ್ರಾಡಿ, ಸುಭಿತ್ ಎನ್.ಆರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಾಘವ ದೇವಾಡಿಗ, ಮೊಹಮ್ಮದ್ ಅಸ್ಲಾಂ, ಅಣ್ಣಪ್ಪ ನಕ್ರೆ, ಪ್ರಭಾಕರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಪೊಟೋಕ್ಯಾಪ್ಶನ್: ಕಾಂಗ್ರೆಸ್ ಅಭ್ಯರ್ಥಿ ಎಚ್.ಗೋಪಾಲ ಭಂಡಾರಿ ಮಾತನಾಡಿದರು.