ಎ. 23: ಪುತ್ತೂರು ಪಕ್ಷೇತರ ಅಭ್ಯರ್ಥಿಯಾಗಿ ಅಮರನಾಥ ಬಿ.ಕೆ ನಾಮಪತ್ರ ಸಲ್ಲಿಕೆ
ಪುತ್ತೂರು, ಎ. 20: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಮರನಾಥ ಬಿ.ಕೆ. ಸ್ಪರ್ಧಿಸುತ್ತಿದ್ದು, ಎ.23ರಂದು ತಾನು ನಾಮಪತ್ರ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರನಾಥ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಚುನಾಯಿತರಾದವರು ತಮ್ಮ ಸ್ವಂತ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ವಿನಹ ಜನಪರ ಚಿಂತನೆಯಲ್ಲಿ ಕಾರ್ಯ ನಡೆಸುತ್ತಿಲ್ಲ. ಯುವ ಜನಾಂಗದ ಅಭಿವೃದ್ಧಿಗಾಗಿ ಯಾರೂ ಈ ತನಕ ಪ್ರಯತ್ನ ನಡೆಸಿಲ್ಲ. ನಾನು ಪದವಿ ಪಡೆದು 13 ವರ್ಷಗಳು ಕಳೆದರೂ ಈ ತನಕ ಯಾವುದೇ ನೌಕರಿ ಪಡೆಯಲು ಸಾಧ್ಯವಾಗಿಲ್ಲ. ನನ್ನಂತೆ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಮಂದಿ ಯುವಕರು ಪದವಿ ಪಡೆದರೂ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆಲ್ಲಾ ಬೆಂಬಲ ನೀಡುವ ನಿಟ್ಟಿನಲ್ಲಿ ತಾನು ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿರುವುದಾಗಿ ಅವರು ತಿಳಿಸಿದರು.
ಪುತ್ತೂರನ್ನು ಕೈಗಾರಿಕಾ ಪ್ರದೇಶವಾಗಿ ಮಾರ್ಪಡಿಸುವುದು, ದೀರ್ಘಾವಧಿ ಕೃಷಿ, ಸಾವಯವ ಕೃಷಿ, ಮಾರುಕಟ್ಟೆ ಆಧಾರಿತ ಕೃಷಿ ಮತ್ತು ರಫ್ತು ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡುವುದು. ಜಾತಿ, ಧರ್ಮವನ್ನು ಮನೆಗೆ ಸೀಮಿತವಾಗಿರಿಸಿ ಅಭಿವೃದ್ಧಿಯ ಧ್ಯೇಯದೊಂದಿಗೆ ಕೆಲಸ ಮಾಡುವುದು. ಉದ್ಯೋಗ ಸೃಷ್ಟಿಯೊಂದಿಗೆ ನಿರುದ್ಯೋಗ ನಿವಾರಣೆಗೆ ಒತ್ತು ನೀಡುವುದು. ನಗರಾಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ, ಪುತ್ತೂರನ್ನು ಪ್ರವಾಸಿ ಕ್ಷೇತ್ರವಾಗಿಸುವುದು ತನ್ನ ಚುನಾವಣಾ ಪ್ರಣಾಳಿಕೆಯಾಗಿದೆ ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ನೋಟಾ ಮತದಾನದಿಂದ ಅಭಿವೃದ್ಧಿ ಶೂನ್ಯವಾಗುತ್ತದೆ. ಯುವ ಜನತೆ ಅಭಿವೃದ್ಧಿ ಪರ ಚಿಂತಕರಿಗೆ ಮತ ಚಲಾವಣೆ ಮಾಡುವುದರಿಂದ ಅವರ ಬದುಕು ಉತ್ತಮವಾಗುತ್ತದೆ. ರಸ್ತೆ ನಿರ್ಮಾಣ ಮತ್ತು ವಿದ್ಯುತ್ ಸೌಲಭ್ಯಗಳು ಮೂಲಭೂತ ಅವಶ್ಯಕತೆಗಳಾಗಿದೆ. ಇದನ್ನು ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆದರೆ ಇದೀಗ ಇದನ್ನೇ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಪುತ್ತೂರನ್ನು ಜಿಲ್ಲೆ ಮಾಡುವತ್ತ ಯಾವುದೇ ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿಯ ಸರಿಯಾದ ಯೋಜನೆ ಇವರಿಗಿಲ್ಲ ಎಂದು ಆರೋಪಿಸಿದ ಅವರು ಪುತ್ತೂರು ನಗರ ಮತ್ತು ವಿಟ್ಲ ನಗರ ವಾಹನ ದಟ್ಟಣೆಯಿಂದ ತತ್ತರಿಸುತ್ತಿದೆ. ಸರಿಯಾದ ಡ್ರೈನೇಜ್ ವ್ಯವಸ್ಥೆಗಳು ಇಲ್ಲಿಲ್ಲ. ರಿಂಗ್ ರಸ್ತೆ ನಿರ್ಮಾಣವಾಗಿಲ್ಲ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕಾಗಿದೆ ಎಂದು ಹೇಳಿದರು.
ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ. ಯಾರು ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಯುವಜನತೆ ತನ್ನನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿವೇಕ್ ಕೃಷ್ಣ ಮತ್ತು ರೋಹಿತ್ ಎಂ.ಪಿ ಉಪಸ್ಥಿತರಿದ್ದರು.