ಭಾರತದ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಪ್ರಧಾನಿ ಮೋದಿಗೆ ಐಎಂಎಫ್ ಮುಖ್ಯಸ್ಥೆಯ ಸಂದೇಶ

Update: 2018-04-20 14:12 GMT

ವಾಷಿಂಗ್ಟನ್, ಎ.20: ಭಾರತದಲ್ಲಿ ಇತ್ತೀಚೆಗೆ 8 ವರ್ಷದ ಬಾಲಕಿಯ ಮೇಲೆ ನಡೆದ ನಾಚಿಕೆಗೇಡಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಗಂಡಾಂತರಕಾರಿ ಎಂದು ಬಣ್ಣಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನ್ ಲ್ಯಾಗರ್ಡ್ , ಪ್ರಧಾನಿ ಮೋದಿಯಿಂದ ಆರಂಭಗೊಂಡು ಭಾರತದ ಆಡಳಿತವು ಈ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ಹಾಗೂ ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದ ಅಮಾನುಷ ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ಭುಗಿಲೆದ್ದಿರುವ ಮಧ್ಯೆಯೇ ಐಎಂಎಫ್‌ನ ಮುಖ್ಯಸ್ಥೆ ಕೂಡಾ ಈ ಘಟನೆಗಳಿಗೆ ಕಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಗಂಡಾಂತರಕಾರಿಯಾಗಿವೆ. ಭಾರತದ ಅಧಿಕಾರಿಗಳು, ಪ್ರಧಾನಿ ಮೋದಿಯಿಂದ ಆರಂಭಿಸಿ, ದೇಶದ ಮಹಿಳೆಯರ ಬಗ್ಗೆ ಹೆಚ್ಚಿನ ಗಮನ ನೀಡುವರೆಂದು ಆಶಿಸುತ್ತೇನೆ. ಇತ್ತೀಚೆಗೆ ದಾವೋಸ್‌ನಲ್ಲಿ ಭಾರತದ ಪ್ರಧಾನಿ ಮೋದಿ ಭಾಷಣ ಮಾಡಿದ ಬಳಿಕ ಮಾತನಾಡಿದ್ದ ತಾನು , ಮೋದಿ ತನ್ನ ಭಾಷಣದಲ್ಲಿ ಭಾರತದ ಮಹಿಳೆಯರ ಬಗ್ಗೆ ಸಾಕಷ್ಟು ಉಲ್ಲೇಖ ಮಾಡಿಲ್ಲ ಎಂದು ತಿಳಿಸಿದ್ದೆ. ಮಹಿಳೆಯರ ಬಗ್ಗೆ ಮಾತಾಡದೆ ಇರುವುದರ ಬಗ್ಗೆ ಮಾತ್ರ ತನ್ನ ಹೇಳಿಕೆ ಸೀಮಿತಗೊಂಡಿರಲಿಲ್ಲ ಎಂದು ಐಎಂಎಫ್ ಆಡಳಿತ ನಿರ್ದೇಶಕಿ ಲ್ಯಾಗರ್ಡೆ ಹೇಳಿದರು. ಆದರೆ ಇದು ತನ್ನ ವೈಯಕ್ತಿಕ ಅಭಿಪ್ರಾಯ. ಇದಕ್ಕೂ ಐಎಂಎಫ್‌ಗೂ ಸಂಬಂಧವಿಲ್ಲ. ಓರ್ವ ಐಎಂಎಫ್ ಅಧಿಕಾರಿಯಾಗಿ ತಾನು ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ಕ್ರಿಸ್ಟಿನ್ ಲ್ಯಾಗರ್ಡ್ ಹೇಳಿದ್ದಾರೆ.

 ಇದಕ್ಕೂ ಮುನ್ನ , ಕಥುವಾ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟರಸ್, ಈ ಪ್ರಕರಣ ಅತ್ಯಂತ ಭಯಾನಕ ಎಂದು ಬಣ್ಣಿಸಿದ್ದರು. ಅಲ್ಲದೆ ಭಾರತದ ಅಧಿಕಾರಿಗಳು ಅಪರಾಧಿಗಳನ್ನು ಶಿಕ್ಷಿಸಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News