ಉಳ್ಳಾಲ ದರ್ಗಾ: ಅತ್ಯಾಚಾರ, ಕೊಲೆ ಖಂಡಿಸಿ ಸಾಮೂಹಿಕ ಪ್ರಾರ್ಥನೆ, ಹಕ್ಕೊತ್ತಾಯ
ಉಳ್ಳಾಲ, ಎ. 20: ಕಥುವಾದಲ್ಲಿ ನಡೆದ ಬಾಲಕಿ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಶುಕ್ರವಾರ ಉಳ್ಳಾಲ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಮುಗ್ದ ಬಾಲಕಿ ಮೇಲೆ ನಡೆದಂತಹ ಕ್ರೂರ ಕೃತ್ಯ ಮುಂದಿನ ದಿನಗಳಲ್ಲಿ ಯಾವುದೇ ಹೆಣ್ಮಕ್ಕಳಿಗೂ ನಡೆಯದಿರಲಿ ಎನ್ನುವ ಪ್ರಾರ್ಥನೆ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಹೇಳಿದರು.
ಕೃತ್ಯ ಅಂತಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕಪ್ಪು ಚುಕ್ಕೆಯಾಗಿದೆ. ಆದರೂ ಪ್ರಧಾನಿ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ. ಹೇಯ ಕೃತ್ಯ ಎಷ್ಟೊಂದು ಪರಿಣಾಮ ಬೀರಿದೆ ಎಂದರೆ ಮಕ್ಕಳೂ ಬೀದಿಗಿಳಿಯುತ್ತಿರುವುದನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ಪ್ರಕರಣದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದರ್ಗಾ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿಯವರಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.
ಟ್ರಸ್ಟ್ ಸದಸ್ಯ ಅಯೂಬ್ ಮಂಚಿಲ ಮಾತನಾಡಿದರು. ದರ್ಗಾ ಉಪಾಧ್ಯಕ್ಷ ಯು.ಕೆ.ಇಸ್ಮಾಯಿಲ್ ಮೋನು, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಮುಸ್ತಫಾ ಎವರೆಸ್ಟ್, ಪದಾಧಿಕಾರಿಗಳು, ಜಮಾತ್ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ವಂದಿಸಿದರು.